
ಬೆಂಗಳೂರು: ಪಾದಚಾರಿಗಳ ಪ್ರಾಣ ಕಂಟಕಗಳು ಎಂದೂ ದೂಷಣೆಗೆ ಗುರಿಯಾಗುವ ಬೀದಿ ನಾಯಿಗಳ ಜೀವಕ್ಕೂ ಈಗ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವ ನೀಡಿದೆ. ಸಂತಾನಹರಣಕ್ಕೊಳಗಾದ ಬೀದಿ ನಾಯಿ ಸಾವನ್ನಪ್ಪಿದ್ದಕ್ಕೆ ವೈದ್ಯಕೀಯ ನಿರ್ಲಕ್ಷ್ಯತನ ಆರೋಪದಡಿ ಖಾಸಗಿ ಸಂಸ್ಥೆಯ ಪಶು ವೈದ್ಯರ ಮೇಲೆ ಬಿಬಿಎಂಪಿ ಪೊಲೀಸರಿಗೆ ದೂರು ನೀಡಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಕೋಗಿಲು ಕ್ರಾಸ್ ಬಳಿ ಸಂತಾನಹರಣಕ್ಕೊಳಗಾಗಿದ್ದ ಹೆಣ್ಣು ನಾಯಿ ಮೃತಪಟ್ಟಿತ್ತು. ಈ ಸಾವಿಗೆ ಶಸ್ತ್ರ ಚಿಕಿತ್ಸೆ ಬಳಿಕ ನಾಯಿಗೆ ಸೂಕ್ತ ಆರೈಕೆ ಸಿಗದಿರುವುದೇ ಕಾರಣ ಎಂದು ಆರೋಪಿಸಿದ ಬಿಬಿಎಂಪಿ, ಈ ಸಂಬಂಧ ಜೂನ್ 12ರಂದು ಶಸ್ತ್ರಚಿಕಿತ್ಸೆ ನಡೆಸಿದ್ದ ಸರ್ವೋದಯ ಟ್ರಸ್ಟ್ ನಿರ್ದೇಶಕರು ಹಾಗೂ ವೈದ್ಯರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ದೂರು ನೀಡಿದೆ.
ಈ ದೂರು ಸ್ವೀಕರಿಸಿರುವ ಬಾಣಸವಾಡಿ ಠಾಣೆ ಪೊಲೀಸರು, ಪ್ರಾಣಿ ಹಿಂಸೆ ನಿರ್ಬಂಧಕ ಕಾಯ್ದೆಯಡಿ ಸರ್ವೋದಯ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಆ ಸಂಸ್ಥೆ ಹಾಗೂ ಪಶು ವೈದ್ಯರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರಿನಲ್ಲೇನಿದೆ?: ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ನಡೆಸುವ ಗುತ್ತಿಗೆಯನ್ನು ಸರ್ವೋದಯ ಟ್ರಸ್ಟಿಗೆ ಪಡೆದಿದೆ. ಇತ್ತೀಚಿಗೆ ಹೆಣ್ಣು ನಾಯಿಯೊಂದಕ್ಕೆ ಚಿಕಿತ್ಸೆ ನೀಡಿದ್ದ ಟ್ರಸ್ಟ್‌ನ ವೈದ್ಯರು, ಗಾಯ ವಾಸಿಯಾಗುವ ಮುನ್ನವೇ ಅದನ್ನು ಆಸ್ಪತ್ರೆಯಿಂದ ಹೊರಗೆ ಬಿಟ್ಟಿದ್ದರು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಆಯಾಸಗೊಂಡಿದ್ದ ಆ ನಾಯಿ, ಕೋಗಿಲು ಕ್ರಾಸ್ ಬಳಿ ಪ್ರಜ್ಞೆ ಕಳೆದುಕೊಂಡು ಬಿದ್ದಿತ್ತು. ಆಗ ಅದನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತು. ಈ ಸಾವಿಗೆ ಟ್ರಸ್ಟ್ ನಿರ್ದೇಶಕರು ಹಾಗೂ ವೈದ್ಯರ ನಿರ್ಲಕ್ಷ್ಯತನವೇ ಕಾರಣ. ಹೀಗಾಗಿ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಣಿ ದಯಾ ಘಟಕದ ಇನ್ಸ್‌ಪೆಕ್ಟರ್ ನವೀನಾ ಕಾಮತ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗೆ ಒಂದು ವಾರ ಆಸ್ಪತ್ರೆಯಲ್ಲೇ ಆರೈಕೆ ಮಾಡಬೇಕು. ಗಾಯ ವಾಸಿಯಾದ ನಂತರವೇ ಹೊರಗೆ ಬಿಡಬೇಕು. ಈ ಅವಧಿಗೂ ಮುನ್ನವೇ ಆಸ್ಪತ್ರೆಯಿಂದ ಹೊರ ಬಂದರೆ ಚರಂಡಿ ಅಥವಾ ಕಸದ ರಾಶಿಯಲ್ಲಿ ಮಲಗುವುದರಿಂದ ಗಾಯ ಉಲ್ಬಣವಾಗಿ ಪ್ರಾಣಕ್ಕೆ ಕುತ್ತು ಬರುತ್ತದೆ. ಹಾಗಾಗಿ ಕೋಗಿಲು ಕ್ರಾಸ್ ಬಳಿ ಬೀದಿ ನಾಯಿ ಸಾವಿಗೂ ಇದೇ ಕಾರಣವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದೇ ರೀತಿ ಪ್ರಕರಣಗಳು ಪದೇ ಪದೇ ವರದಿಯಾಗಿವೆ. ಈ ಬಗ್ಗೆ ಗಮನಹರಿಸುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಟ್ರಸ್ಟ್‌ನವರು ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಬೇಕಾಯಿತು ಎಂದು ಇನ್ಸ್‌ಪೆಕ್ಟರ್ ನವೀನಾ ಕಾಮತ್ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.