ಟ್ಯಾಂಕರ್‌ ನೀರಿಗೆ ಶೀಘ್ರ ಏಕ ರೂಪದ ದರ

Published : Apr 13, 2019, 09:36 AM IST
ಟ್ಯಾಂಕರ್‌ ನೀರಿಗೆ ಶೀಘ್ರ ಏಕ ರೂಪದ ದರ

ಸಾರಾಂಶ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲಿ  ನೀರು ಪೂರೈಕೆಗೆ ಏಕರೂಪ ದರ ನಿಗದಿಪಡಿಸಲು ನಿರ್ಧರಿಸಿದೆ. 

ಬೆಂಗಳೂರು :  ನೀರು ಪೂರೈಕೆಗೆ ಏಕರೂಪ ದರ ನಿಗದಿಪಡಿಸಲು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಟ್ಯಾಂಕರ್‌ ಮಾಲೀಕರಿಗೆ ಸೊಪ್ಪು ಹಾಕದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲಿ ಅಧಿಕೃತ ದರ ಪಟ್ಟಿಪ್ರಕಟಿಸಲಿದೆ.

ಖಾಸಗಿ ಟ್ಯಾಂಕರ್‌ ಮಾಲೀಕರು ಜನರಿಂದ ದುಬಾರಿ ಹಣ ವಸೂಲಿ ಮಾಡುತ್ತಾರೆಂದು ಆರೋಪಿಸಿ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಟ್ಯಾಂಕರ್‌ ನೀರು ಸರಬರಾಜಿಗೆ ನಿಗದಿತ ದರ ಪಟ್ಟಿಯನ್ನು ಪ್ರಕಟಿಸುವ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಕಳೆದ ತಿಂಗಳು ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಜತೆಗೆ, ತಮ್ಮ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಿದ್ದ ಆಯುಕ್ತರು, ನೀರು ಪೂರೈಕೆಗೆ ಆಹ್ವಾನಿಸುವ ಟೆಂಡರ್‌ನಲ್ಲಿ ಭಾಗವಹಿಸಿರುವ ಟ್ಯಾಂಕರ್‌ ಮಾಲೀಕರು ಬಿಡ್ಡಿಂಗ್‌ ಮಾಡುವ ದರವನ್ನು ಆಧರಿಸಿ ಏಕರೂಪ ದರ ನಿಗದಿಪಡಿಸಲು ತೀರ್ಮಾನ ಕೈಗೊಂಡಿದ್ದರು.

ಆದರೆ, ಬಿಬಿಎಂಪಿ ಆಹ್ವಾನಿಸಿರುವ ಟೆಂಡರ್‌ನಿಂದಲೇ ಟ್ಯಾಂಕರ್‌ ಮಾಲೀಕರು ದೂರ ಉಳಿದ್ದಾರೆ. ಏಕರೂಪ ದರ ನಿಗದಿಯಾದರೆ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಟ್ಯಾಂಕರ್‌ ಮಾಲೀಕರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ. ಇದರಿಂದ ಬಿಬಿಎಂಪಿ ಎರಡನೇ ಬಾರಿ ಟೆಂಡರ್‌ ಕರೆದಿದೆ. ಈ ಬಾರಿಯೂ ಟ್ಯಾಂಕರ್‌ ಮಾಲೀಕರು ಟೆಂಡರ್‌ನಲ್ಲಿ ಭಾಗವಹಿಸಿ ಬಿಡ್ಡಿಂಗ್‌ ದರ ತಿಳಿಸದಿದ್ದರೆ ಅಂತಿಮವಾಗಿ ಏ.22ರಂದು ಲೋಕೋಪಯೋಗಿ ಇಲಾಖೆ (ಪಿಡ್ಲ್ಯೂಡಿ ) ನಿಗದಿ ಪಡಿಸಿರುವ ದರಪಟ್ಟಿಆಧರಿಸಿ ಬಿಬಿಎಂಪಿ ಅಧಿಕೃತ ದರಪಟ್ಟಿಹೊರಡಿಸಲು ಬಿಬಿಎಂಪಿಗೆ ನಿರ್ದೇಶಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುತ್ತಿಗೆಯಲ್ಲಿ ಭಾಗವಹಿಸದಿರಲು ಕಾರಣ:

ಟ್ಯಾಂಕರ್‌ ನೀರು ಸರಬರಾಜಿಗೆ ಆಹ್ವಾನಿಸಿರುವ ಟೆಂಡರ್‌ನಲ್ಲಿ ಕಠಿಣವಾದ ಷರತ್ತು ವಿಧಿಸಿರುವುದು. ಅದರಲ್ಲಿ ಮುಖ್ಯವಾಗಿ ಎಪಿಐ ಕೋಟೆಡ್‌ (ಎಥೋಕ್ಸೈಲೇಟೆಡ್‌ ಪಾಲಿಯೆಥೈಮಿನ್‌) ಟ್ಯಾಂಕರ್‌ ಆಗಿರಬೇಕು. ವಾಹನ ಆರ್‌ಟಿಒ ಪ್ರಮಾಣಿಕೃತವಾಗಿರಬೇಕು. ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಬೇಕು. ಟ್ಯಾಂಕರ್‌ ಮಾಲೀಕರ ಹೆಸರು ಮತ್ತು ದೂರವಾಣಿ ಸಂಖ್ಯೆ, ಸರಬರಾಜು ಮಾಡುವ ನೀರಿನ ಗುಣಮಟ್ಟದ ಪ್ರಮಾಣ ಪತ್ರ ಟ್ಯಾಂಕರ್‌ ಮೇಲೆ ಪ್ರಕಟಿಸಿರಬೇಕು ಎಂದು ಷರತ್ತುಗಳನ್ನು ವಿಧಿಸಿರುವುದರಿಂದ ಟ್ಯಾಂಕರ್‌ ಮಾಲೀಕರು ಗುತ್ತಿಗೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಟ್ಯಾಂಕರ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಈ ಷರತ್ತುಗಳು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ದರ

ಲೋಕೋಪಯೋಗಿ ಇಲಾಖೆ ಬೆಂಗಳೂರು ವಲಯದಲ್ಲಿ ಖಾಸಗಿ ನೀರಿನ ಮೂಲದಿಂದ ನಾಲ್ಕು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ಮೂಲಕ ಒಂದು ದಿನಕ್ಕೆ ಏಳು ಬಾರಿ (ಟ್ರಿಪ್‌) ನೀರು ಪೂರೈಕೆ ಮಾಡಿದರೆ 2,782 ನಿಗದಿ ಪಡಿಸಿದೆ. ಅದರಲ್ಲಿ ವಾಹನ ಚಾಲಕ ಮತ್ತು ನೀರುಗಂಟಿ (ವಾಟರ್‌ ಮ್ಯಾನ್‌) ಸಂಭಾವನೆ, ಟ್ರಾಕ್ಟರ್‌ ಅಥವಾ ವಾಹನ ನಿರ್ವಹಣಾ ವೆಚ್ಚ ಮತ್ತು ಟ್ಯಾಂಕರ್‌ ಬಾಡಿಗೆ ಸೇರಿರಲಿದೆ.

400ಕ್ಕೆ ಸಿಗುತ್ತಾ ಶುದ್ಧ ನೀರು?

ಬಿಬಿಎಂಪಿ ಒಂದು ವೇಳೆ ಪಿಡ್ಲ್ಯೂಡಿ ದರಪಟ್ಟಿಯಂತೆ ಆಧರಿಸಿ ಟ್ಯಾಂಕರ್‌ ನೀರಿನ ದರ ನಿಗದಿ ಪಡಿಸಿ ಆದೇಶ ಮಾಡಿದರೆ 397ಕ್ಕೆ ನಾಲ್ಕು ಸಾವಿರ ಲೀಟರ್‌ ನೀರನ್ನು ಟ್ಯಾಂಕರ್‌ ಮಾಲೀಕರು ಪೂರೈಕೆ ಮಾಡಬೇಕಾಗುತ್ತದೆ. ಈ ಪ್ರಕಾರ ಒಂದು ಲೀಟರ್‌ ನೀರಿಗೆ 62 ರಿಂದ 69 ಪೈಸೆ ಆಗಲಿದೆ. ಆದರೆ, ಇದೀಗ ಒಂದು ಟ್ಯಾಂಕರ್‌ ನೀರಿಗೆ (4 ಸಾವಿರ ಲೀ)  800ರಿಂದ 1200 ರವರೆಗೆ ಸಾರ್ವಜನಿಕರಿಂದ ವಸೂಲಿ ಮಾಡುತ್ತಿರುವ ಟ್ಯಾಂಕರ್‌ ಮಾಲೀಕರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಬಿಎಂಪಿ ಸಾರ್ವಜನಿಕರ ಹಿತ ದೃಷ್ಟಿಯಿಂದ ತ್ವರಿತವಾಗಿ ಏಕರೂಪ ದರ ನಿಗದಿ ಪಡಿಸಿ ಆದೇಶಿಸುವುದು ತೀರಾ ಅಗತ್ಯವಾಗಿದೆ ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.

ಪಿಡ್ಲ್ಯೂಡಿ ದಿನ ಬಾಡಿಗೆ ದರಪಟ್ಟಿವಿವರ (4ಸಾವಿರ ಲೀ ಟ್ಯಾಂಕ್‌)

ವಿವರ    ಖಾಸಗಿ ನೀರು ಪೂರೈಕೆ ದರ (ರು)    ಜಲಮಂಡಳಿ ನೀರಿನ ಪೂರೈಕೆ ದರ (ರು)

ಟ್ರಾಕ್ಟರ್‌    1,288    1,288

ಟ್ಯಾಂಕರ್‌    412    412

ನೀರಿನ ದರ    160    -

ಚಾಲಕನ ಸಂಭಾವನೆ    466    466

ನೀರಗಂಟಿ    456    456

ಒಟ್ಟು    2,782    (ಏಳು ಟ್ರಿಪ್‌ಗೆ)    2,622 (ಏಳು ಟ್ರಿಪ್‌ಗೆ)

ನೀರು ಅತ್ಯಂತ ಅಗತ್ಯವಾದ ವಸ್ತು ಆಗಿರುವುದರಿಂದ ಟ್ಯಾಂಕರ್‌ ನೀರಿನ ದರಕ್ಕೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಚುನಾವಣೆ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

-ಎನ್‌.ಮಂಜುನಾಥಪ್ರಸಾದ್‌, ಬಿಬಿಎಂಪಿ ಆಯುಕ್ತ.

*4 ಸಾವಿರ: ಅಂದಾಜು ನಗರದಲ್ಲಿರುವ ನೀರು ಪೂರೈಕೆ ಟ್ಯಾಂಕರ್‌ಗಳು.

*165: ಟ್ಯಾಂಕರ್‌ಗಳಿಗೆ ಮಾತ್ರ ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ.

*110: ಹಳ್ಳಿಗಳಿಗೆ ಬಿಬಿಎಂಪಿಯಿಂದಲೇ ನೀರು ಪೂರೈಕೆ

*68: ಜಲಮಂಡಳಿ ಬಳಿ ಇರುವ ಟ್ಯಾಂಕರ್‌ಗಳು.

*6: ಅಂದಾಜು ನಗರದಲ್ಲಿ ಇರುವ ಬೋರ್‌ವೆಲ್‌ಗಳು.

ಸಾಮರ್ಥ್ಯವಾರು ಟ್ಯಾಂಕರ್‌ ನೀರಿನ ದರ (ದಿನ ಬಾಡಿಗೆ)

ಲೀಟರ್‌    ಒಟ್ಟು ಟ್ರಿಪ್‌    ಖಾಸಗಿ ನೀರು ಪೂರೈಕೆ ದರ(ರು)    ಜಲಮಂಡಳಿ ನೀರು ಪೂರೈಕೆ ದರ(ರು)

4,000    07    2,782    2,622

6,000    07    4,173    3,933

8,000    07    5,564    5,244

12,000    07    7,867    8,347

ವರದಿ :  ವಿಶ್ವನಾಥ ಮಲೇಬೆನ್ನೂರು

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ