
ಹೊಸನಗರ[ಏ. 12] ಸಾಮೂಹಿಕ ಪ್ರಾರ್ಥನೆಗೆ ಬಹಳ ದೊಡ್ಡ ಶಕ್ತಿ ಇದ್ದು, ಜನ ಮನ ಸೇರಿದಲ್ಲಿ ಜನಾರ್ದನ ಪ್ರೀತಿ ಇರುತ್ತದೆ. ಜೀವ ಚೈತನ್ಯಗಳು ಸೇರಿದಾಗ ದೇವ ಚೈತನ್ಯದ ಪ್ರಾವಿರ್ಭಾಗ್ಯವಾಗುತ್ತದೆ. ಧಾರಾಕಾರವಾದ ಭಕ್ತಿಯ ಸಮರ್ಪಣೆ ಮಾಣಿಮಠದಲ್ಲಿ ನಡೆದಿದ್ದು, ಮಹಾಕ್ಷೇತ್ರವಾಗಿದೆ. ಸೇವೆಯ ಮುಂದೆ ಸಂಪತ್ತು ಗೌಣ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅವರು ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಗುರುವಾರ 26ನೇ ಯೋಗಪಟ್ಟಾಭಿಷೇಕ ದಿನದ ಅಂಗವಾಗಿ ನಡೆದ ಮಹಾಪಾದುಕಾ ಪೂಜೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿ ಮಠದಲ್ಲಿ ಸ್ಥಳಾವಕಾಶದ ಕೊರತೆ ಆಗುವಷ್ಟು ರೀತಿಯಲ್ಲಿ ಪಾದ ಪೂಜೆ ನಡೆದಿದೆ. ಮಠದ ಹಾಗೂ ಮಠಗಳ ಇತಿಹಾಸದಲ್ಲಿ ಈ ಪಾದುಕಾಪೂಜೆ ವಿಶ್ವವಿಕ್ರಮವಾಗಿದೆ. ಸಾವಿರ ಸಾವಿರ ಸದ್ಭಾವಗಳ ಸಮಾವೇಶ ಮಹಾಪಾದಪೂಜೆಯ ಮೂಲಕ ನಡೆದಿದೆ. ಮಹಾಗುರು ಸಮಾರಾಧನೆಯಿಂದ ಈ ಮಣ್ಣಿನ ಕಣಕ್ಕೆ ಮಹಾಪುಣ್ಯ ಒದಗಿ ಬಂತು. ಮಾಣಿಯ ಮಣ್ಣು ಮಾಣಿಕ್ಯವಾಗಿದ್ದು, ಎಸೆಯುವ ಕಲ್ಲುಗಳೂ ವಜ್ರವಾಗುವುದು ಈ ಕ್ಷೇತ್ರದ ವಿಶೇಷ ಎಂದು ತಿಳಿಸಿದರು.
ಗೋವು ಹಾಗೂ ಭಕ್ತಿ ಇದ್ದಲ್ಲಿ ದೇವರ ರಕ್ಷಣೆ ಖಚಿತ: ರಾಘವೇಶ್ವರ ಶ್ರೀ
ಬಿ.ಕೆ.ಎಸ್ ವರ್ಮಾ ಹಾಗೂ ನೀರ್ನಳ್ಳಿ ಗಣಪತಿ ಅವರುಗಳ ಕುಂಚಕೌಶಲ್ಯ ಹಾಗೂ ಡಾ. ಶಾರದಾ ಜಯಗೋವಿಂದ ಅವರ ಶಬ್ದಕೌಶಲ್ಯದಿಂದ ಮೂಡಿಬಂದಿರುವ ಶ್ರೀರಾಘವೇಶ್ವರ ಮಹಾಸ್ವಾಮಿಗಳವರ ಜೀವನ ಚಿತ್ರಕಥೆ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಗೋಸ್ವರ್ಗದಲ್ಲಿ ಮೇ ತಿಂಗಳಲ್ಲಿ ನಡೆಯುವ ಮಕ್ಕಳ ಮಹಾ ಸಮ್ಮೇಳನ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಶ್ರೀ ಮಠದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಭಾರತೀ ಪ್ರಕಾಶನದ ಕಾರ್ಯದರ್ಶಿ ಅನುರಾಧಾ ಪಾರ್ವತಿ, ಗೋಸ್ವರ್ಗದ ಅಧಕ್ಷ ಆರ್. ಎಸ್. ಹೆಗಡೆ, ಭಾರತೀಯ ಗೋಪರಿವಾರದ ಮಹೇಶ್ ಚಟ್ನಳ್ಳಿ, ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ಗಣೇಶ್ ಭಟ್ ಮೈಕೆ ಮತ್ತು ಮಠದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಗಾರಡ್ಕ ಜನಾರ್ದನ ಭಟ್ ದಂಪತಿಗಳು ಸಭಾ ಪೂಜೆ ನಡೆಸಿದರು. ಕಾರ್ಯದರ್ಶಿ ಸತ್ಯನಾರಾಯಣ ಶರ್ಮ ಪ್ರಸ್ತಾವನೆಗೈದರು. ಹವ್ಯಕ ಮಹಾಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು ಅವಲೋಕಿಸಿದರು. ಜೀವನ ಚಿತ್ರ ಪುಸ್ತಕ ಮಾಹಿತಿಯನ್ನು ಶಾರದಾ ಜಯಗೋವಿಂದ ನಡೆಸಿದರು. ಯು. ಎಸ್. ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಭಕ್ತಿಗೆ ದೇವರು ಒಲಿದ ಪರಿ: ಪಾದಪೂಜೆ ಆರಂಭಕ್ಕೂ ಮೊದಲಿನ ಮಿಂಚು ರಾಮನ ಮಂದಹಾಸದ ಬೆಳಕಾದರೆ, ಗುಡುಗು ರಾಮನ ನಗುವಿನ ನಾದವಾಗಿದೆ. ಬಳಿಕ ಬಿದ್ದ ನಾಲ್ಕಾರು ಹನಿಗಳು ರಾಮನ ಆನಂದ ಭಾಷ್ಪವಾಗಿದೆ. ಭಕ್ತರ ಭಕ್ತಿಗೆ ರಾಮ ಸೇರಿ ಗುರು ಪರಂಪರೆ ಸಂತೋಷ ವ್ಯಕ್ತ ಪಡಿಸಿದ ಪರಿ ಇದು ಎಂದು ಶ್ರೀಗಳು ಹೇಳಿದರು.
ಮಹಾಪಾದುಕಾ ಪೂಜೆ: 102 ವಲಯದ 4414 ಮಂದಿ ಮಹಾ ಪಾದುಕಾ ಪೂಜೆಯಲ್ಲಿ ಭಾಗವಹಿಸಿದ್ದು, ಪ್ರಾತಃಕಾಲ 6ರಿಂದ ಪೂಜಾಕಾರ್ಯ ಆರಂಭವಾಗಿದ್ದು, ಮೂರು ತಂಡಗಳಾಗಿ ವಿಭಾಗಿಸಿ ಅವಕಾಶ ಕಲ್ಪಿಸಲಾಯಿತು. 5 ಸಾವಿರಕ್ಕೂ ಅಧಿಕ ಮಂದಿ ಕುಟುಂಬ ಸಮೇತರಾಗಿ ಧಾಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.