‘ಶ್ರೀರಾಮುಲುಗೆ ಈ ವಿಚಾರವೇ ಗೊತ್ತಿಲ್ಲ’

By Web DeskFirst Published Oct 23, 2018, 9:40 AM IST
Highlights

ಮೊಳಕಾಲ್ಮುರು ಶಾಸಕ ಶ್ರೀರಾಮುಲು ಕನ್ನಡಿಗನೇ ಅಲ್ಲ ಎಂದು ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶ್ರೀರಾಮುಲುಗೆ 371(ಜೆ) ಕಾಯ್ದೆ ಬಗ್ಗೆ ಗೊತ್ತಾ ಎಂದು ಮೂದಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಗುಂತಕಲ್ಲಿನ ಸೊಸೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 

ಹೂವಿನಹಡಗಲಿ :  ಮೊಳಕಾಲ್ಮುರು ಶಾಸಕ ಶ್ರೀರಾಮುಲು ಕನ್ನಡಿಗನೇ ಅಲ್ಲ ಎಂದು ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶ್ರೀರಾಮುಲುಗೆ 371(ಜೆ) ಕಾಯ್ದೆ ಬಗ್ಗೆ ಗೊತ್ತಾ ಎಂದು ಮೂದಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಗುಂತಕಲ್ಲಿನ ಸೊಸೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹಿರೇಮಲ್ಲನಕೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಪ್ರಚಾರ ಭಾಷಣ ಮಾಡಿದ ಅವರು, ಶ್ರೀರಾಮುಲು ಮತ್ತು ಜೆ.ಶಾಂತಾ ವಿರುದ್ಧ ಹರಿಹಾಯ್ದರು. ಶ್ರೀರಾಮುಲುಗೆ ಸರಿಯಾಗಿ ಕನ್ನಡ ಮಾತನಾಡಲೂ ಬರುವುದಿಲ್ಲ. ಇನ್ನು ಶಾಂತಾ ಆಂಧ್ರಪ್ರದೇಶದ ಗುಂತಕಲ್ಲಿನ ಸೊಸೆ. ಇಂಥವರಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದರು.

ಹೈಟು, ಗಡ್ಡಕ್ಕೆ ವೋಟ್‌ ಕೊಡ್ಬೇಕಾ?:

ಶ್ರೀರಾಮುಲುಗೆ 371(ಜೆ)ಕಾಯ್ದೆ ಬಗ್ಗೆ ಗೊತ್ತಾ? ಅದನ್ನು ಯಾವ ಕಾರಣಕ್ಕಾಗಿ ಜಾರಿಗೆ ತಂದರು ಅಂತಾದರೂ ತಿಳಿದಿದೆಯಾ? ಆತನಿಗೆ ಬರೀ 307 (ಕೊಲೆ ಯತ್ನ), 420 (ವಂಚನೆ), 306 (ಆತ್ಮಹತ್ಯೆಗೆ ಪ್ರಚೋದನೆ) ಸೆಕ್ಷನ್‌ಗಳು ಮಾತ್ರ ಗೊತ್ತು? ಲೋಕಸಭೆಯಲ್ಲಿ ಶ್ರೀರಾಮುಲು, ಜೆ.ಶಾಂತಾ ಎಷ್ಟುಬಾರಿ ಮಾತನಾಡಿದ್ದಾರೆ? ಇವರೇನು ಆಲಂಕಾರಿಕ ವಸ್ತುಗಳಾ? ಒಂದೇ ಒಂದು ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರಾ? ಆತನ (ಶ್ರೀರಾಮುಲು) ಹೈಟು, ಗಡ್ಡ ನೋಡಿ ಮತ ಹಾಕಬೇಕಾ ಎಂದು ವ್ಯಂಗ್ಯವಾಡಿದರು.

ಉಗ್ರಪ್ಪನವರ ಬಗ್ಗೆ ಯಾವ ವಿಚಾರದಲ್ಲಿಯೂ ಮಾತನಾಡುವ ನೈತಿಕತೆ ರಾಮುಲುಗೆ ಇಲ್ಲ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ವಿ.ಎಸ್‌.ಉಗ್ರಪ್ಪ ಅವರೇ ರಾಜ್ಯದ ವಾಲ್ಮೀಕಿ ಸಮುದಾಯದ ಅಗ್ರಮಾನ್ಯ ನಾಯಕ ಎಂದು ಪ್ರತಿಪಾದಿಸಿದರು. ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರಗಳಲ್ಲಿರುವ ಉಗ್ರಪ್ಪ ನನ್ನ ಸರಿ ಸಮಾನ. ದೇಶದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು. ಆದರೆ ಜಿಲ್ಲೆಯ ಸಂಪತ್ತು ಲೂಟಿ ಮಾಡಿ ಜೈಲು ಸೇರಿಲ್ಲ ಎಂದು ಟಾಂಗ್‌ ನೀಡಿದರು.

ಪಿಟಿಪಿಗೆ ಮಂತ್ರಿಗಿರಿಗೆ ಒತ್ತಾಯ

ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ. ಅವರು ಸಿಎಂ ಆದರೆ ನಾನೇ ಸಿಎಂ ಆದಂತೆ ಎಂದು ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. ಇದೇ ವೇಳೆ ಪಿ.ಟಿ ಪರಮೇಶ್ವರ ನಾಯ್ಕ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನೆರೆದಿದ್ದ ಜನರೆಲ್ಲಾ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ಪ್ರಸಂಗವೂ ನಡೆಯಿತು.

ರಿಪಬ್ಲಿಕ್‌ ಆಫ್‌ ಬಳ್ಳಾರಿ!

ನಾವು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಬಳಿಕವೇ ಇಲ್ಲಿ ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಆಗಿ ಬದಲಾಯಿತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಎಂದು ಏಕೆ ಕರೆದರು ಎಂಬುದು ಗೊತ್ತೇ ಎಂದು ಪ್ರಶ್ನಿಸಿದರು.

click me!