ಉಸಿರಾಡುತ್ತಿದೆಯಂತೆ ಶ್ರೀರಾಂಪುರದ ಹಜ್ರತ್ ದರ್ಗಾ

By Suvarna Web DeskFirst Published Nov 20, 2017, 9:00 AM IST
Highlights

ಹೊಸದುರ್ಗ ತಾಲೂಕಿನ ಶ್ರೀರಾಂಪುರದ ದೇವಿಕೆರೆಗೆ ಹೊಂದಿಕೊಂಡಂತಿರುವ ಹಜ್ರತ್ ಫತೇಶಾ ಖಾದ್ರಿ ರೆಹಮತ್ ವುಲ್ಲಾ ಅಲೈ ಎಂಬ ದರ್ಗಾದಲ್ಲಿರುವ ಸಮಾಧಿ ಉಸಿರಾಡುತ್ತಿದೆ ಎನ್ನಲಾಗುತ್ತಿದೆ. ಸಮಾಧಿಯ ಮೇಲೆ ಹಾಕಲಾಗಿರುವ ಬಟ್ಟೆಯ ಮಧ್ಯದಲ್ಲಿ ಕಳೆದ ಒಂದು ವಾರದಿಂದ ಏರಿಳಿತ ಕಂಡು ಬರುತ್ತಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಹೊಸದುರ್ಗ(ನ.):  ರಾಜ್ಯದಲ್ಲಿ ಗಣೇಶ ಹಾಲು ಕುಡಿದ, ಸಾಯಿ ಬಾಬಾನ ಕಣ್ಣಲ್ಲಿ ನೀರು ಬಂದಿದ್ದನ್ನು, ಆಂಜನೇಯ ಸ್ವಾಮಿ ವಿಗ್ರಹದಲ್ಲಿ ಹಾಲು ಉಕ್ಕಿದ ಸುದ್ದಿಯನ್ನು ಕೇಳಿದ್ದೇವೆ, ನೋಡಿದ್ದೇವೆ. ಅದೇ ರೀತಿಯಾಗಿ ದರ್ಗಾವೊಂದರ ಸಮಾಧಿ ಉಸಿರಾಡುತ್ತಿರುವ ಸುದ್ದಿಯೊಂದು ಈಗ ಸದ್ದು ಮಾಡಿದೆ.

ಹೊಸದುರ್ಗ ತಾಲೂಕಿನ ಶ್ರೀರಾಂಪುರದ ದೇವಿಕೆರೆಗೆ ಹೊಂದಿಕೊಂಡಂತಿರುವ ಹಜ್ರತ್ ಫತೇಶಾ ಖಾದ್ರಿ ರೆಹಮತ್ ವುಲ್ಲಾ ಅಲೈ ಎಂಬ ದರ್ಗಾದಲ್ಲಿರುವ ಸಮಾಧಿ ಉಸಿರಾಡುತ್ತಿದೆ ಎನ್ನಲಾಗುತ್ತಿದೆ. ಸಮಾಧಿಯ ಮೇಲೆ ಹಾಕಲಾಗಿರುವ ಬಟ್ಟೆಯ ಮಧ್ಯದಲ್ಲಿ ಕಳೆದ ಒಂದು ವಾರದಿಂದ ಏರಿಳಿತ ಕಂಡು ಬರುತ್ತಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಕಳೆದ ಬುಧವಾರ ಮುನೀರ್ ಎಂಬ ಯುವಕ ಸಮಾಧಿಯನ್ನು ಸ್ವಚ್ಛಗೊಳಿಸಲು ಹೋದಾಗ ಸಮಾಧಿಯ ಮೇಲೆ ಹಾಕಿದ್ದ ಬಟ್ಟೆಯ ಮಧ್ಯಬಾಗದಲ್ಲಿ ಏರಿಳಿತವಾಗುತ್ತಿರುವುದನ್ನು ಕಂಡು ಸಮಾಜದ ಮುಖಂಡರಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಉಸಿರಾಡುವ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ನಾನಾ ಭಾಗಗಳಿಂದ ಮುಸ್ಲೀಮರು ಬಂದು ಪೂಜೆ ಸಲ್ಲಿಸಿ ಹೊಗುತ್ತಿದ್ದಾರೆ. ಅಲ್ಲದೆ ಈ ಸಮಾಧಿಯ ಶಾಂತಿಗಾಗಿ ಹೊಸದುರ್ಗ, ಹುಳಿಯಾರು ಹಾಗೂ ಶ್ರೀರಾಂಪುರದ ಮಸೀದಿಗಳಲ್ಲಿನ ಗುರುಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದರೂ ಬಟ್ಟೆಯೊಳಗೆ ಗಾಳಿಯ ಏರಿಳಿತದ ಲಕ್ಷಣಗಳು ಕಂಡು ಬರುತ್ತಿವೆ ಎನ್ನುತ್ತಾರೆ ಯುವಕ ಸೈಯದ್ ಏಜಾಸ್.

1992ರಲ್ಲಿ ಈ ಸಮಾಧಿ ಪತ್ತೆ: 1992 ರಲ್ಲಿ ಬೆಂಗಳೂರು ವಾಸಿಯಾಗಿದ್ದ ಶ್ರೀರಾಂಪುರದ ಗಫೂರ್ ಅವರ ಕನಸಿನಲ್ಲಿ ಬಂದಿದ್ದ ಖಾದ್ರಿ ರೆಹಮತ್ ವುಲ್ಲಾ ಅಲ್ಯೆ ಅವರು ಶ್ರೀರಾಂಪುರ ಗ್ರಾಮದ ಮರಿಯಣ್ಣ ಎಂಬುವವರ ಜಮೀನಿನಲ್ಲಿದ್ದೇನೆ. ನನ್ನನ್ನು ಹೊರತೆಗೆ ಎಂದು ಹೇಳಿದ್ದರಂತೆ. ಅದರಂತೆ ಮರಿಯಣ್ಣನ ಜಮೀನಿಗೆ ಬಂದು ನೋಡಲಾಗಿ ಮಣ್ಣಿನಿಂದ ಮುಚ್ಚಿದ್ದ ಗುಡ್ಡೆಯನ್ನು ತೆಗೆದಾಗ 3 ಸಮಾಧಿಗಳು ಕಂಡು ಬಂದವು ಎನ್ನುತ್ತಾರೆ ಸದ್ದಾಂ. ಅಂದಿನಿಂದ ಈ ಜಾಗವನ್ನು ಮುಸ್ಲಿಂ ಸಮುದಾಯದವರು ಮರಿಯಣ್ಣ ಅವರಿಂದ ಪಡೆದು ಇಲ್ಲಿ ದರ್ಗಾ ನಿರ್ಮಿಸಿ ವರ್ಷಕ್ಕೊಮ್ಮೆ ಉರಸ್ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಪ್ರತಿ ಶುಕ್ರವಾರ ಹಿಂದು ಮುಸ್ಲಿಂ ಆದಿಯಾಗಿ ಜನ ಪೂಜೆ ಸಲ್ಲಿಸಿ ಬರುತ್ತಿದ್ದಾರೆ. ಹಗಲು ವೇಳೆಯಲ್ಲಿ ಈ ಏರಿಳಿತ ಹೆಚ್ಚಾಗಿ ಕಂಡು ಬರುವುದಿಲ್ಲವಾದರೂ ಸಂಜೆಯಾದಂತೆ ಹೆಚ್ಚಾಗುತ್ತದೆ ಎನ್ನಲಾಗಿದೆ.

ವರದಿ: ಶ್ರೀರಾಂಪುರ ವಿಶ್ವನಾಥ್ - ಕನ್ನಡಪ್ರಭ

click me!