
ಬೆಳಗಾವಿ (ನ.29): ಎರಡು ದಿನಗಳ ಬ್ರೇಕ್ ನಂತರ ಚಳಿಗಾಲದ ಅಧಿವೇಶನ ಇಂದು ಮತ್ತೆ ಪುನಾರಂಭವಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸೋ ಬದಲು ನಮ್ಮ ಜನ ನಾಯಕರು ಆರೋಪ - ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ. ಇದರ ಮಧ್ಯೆ ಇಂದು ಖಾಸಗಿ ವೈದ್ಯರ ನಿಯಂತ್ರಣ ಕಾಯ್ದೆ ಮಂಡನೆಯಾಗೋ ಸಾಧ್ಯತೆ ಇದ್ದು ಕುತೂಹಲ ಕೆರಳಿಸಿದೆ. ಆದರೆ ಸಿಎಂ ಸಿದ್ದರಾಮಯ್ಯನವರೇ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಅನುಮಾನ ಅಂತ ಹೇಳಲಾಗುತ್ತಿದೆ.
ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸರ್ಕಾರದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಇಂದು ಅಧಿವೇಶನದಲ್ಲಿ ಮಂಡನೆಯಾಗಲಿದೆ ಎನ್ನಲಾಗಿದೆ. ಆದ್ರೆ ಕಲಾಪದ ಪಟ್ಟಿಯಲ್ಲಿ ಈ ವಿಧೇಯಕದ ಮಂಡನೆ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಬಿಲ್ ನ್ನು ಸರ್ಕಾರ ಸದನದಲ್ಲಿ ಮಂಡಿಸೋ ಬಗ್ಗೆ ಅನುಮಾನಗಳಿವೆ.
ಅಧಿವೇಶನ ಮುಕ್ತಾಯಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಆದ್ರೆ ಈ ಎರಡು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸೋದು ಕೇವಲ ಎರಡು ದಿನ ಮಾತ್ರ. ಇಂದು ಮಂಡ್ಯ ಪ್ರವಾಸ ಮುಗಿಸಿ ಸಂಜೆ ಸುವರ್ಣಸೌಧದಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ನೇರವಾಗಿ ಆಗಮಿಸಲಿದ್ದಾರೆ. ಮಂಗಳವಾರದ ಕಲಾಪಕ್ಕೆ ಹಾಜರಾಗಿ ಬುಧವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿಗಳಿಲ್ಲದ ಕಲಾಪ ಗಂಭೀರವಾಗಿ ನಡೆಯುತ್ತಾ ಅನ್ನೋ ಅನುಮಾನವೂ ಈ ಭಾಗದ ಜನರನ್ನ ಕಾಡ್ತಿದೆ.
ಮೆಡಿಕಲ್ ಬಿಲ್ ನ್ನು ಮಂಡಿಸಿಯೇ ಸಿದ್ಧ ಎಂದು ಈಗಾಗಲೇ ಆರೋಗ್ಯ ಸಚಿವ ರಮೇಶಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂದು ಕಲಾಪದ ವೇಳಾ ಪಟ್ಟಿಯಲ್ಲಿ ಸೇರಿಸುವ ಮೂಲಕ ವಿಧೇಯಕವನ್ನ ಮಂಡಿಸುವ ಸಾಧ್ಯತೆಯೂ ಹೆಚ್ಚಿದೆ. ಜೊತೆಗೆ ಜಾರ್ಜ್ ರಾಜೀನಾಮೆಗೆ ಒತ್ತಾಯಿಸುವ ಬದಲು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯಲ್ಲಿ ಪಾಲ್ಗೊಳ್ಳಲು ಪ್ರತಿಪಕ್ಷಗಳು ತೀರ್ಮಾನಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.