ಟಿಪ್ಪು ಜಯಂತಿ: ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ

By Suvarna Web DeskFirst Published Nov 10, 2016, 6:08 AM IST
Highlights

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಗ್ಗೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶಿಸುತ್ತಾ ಸಭಾಂಗಣಕ್ಕೆ ನುಗ್ಗಲು ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಬೆಂಗಳೂರು/ಮಡಿಕೇರಿ/ಮಂಡ್ಯ(ನ. 10): ಟಿಪ್ಪು ಜಯಂತಿ ಆಚರಣೆ ವೇಳೆ ಪ್ರತಿಭಟನೆಗೆ ಮುಂದಾದ ಹಲವು ಮುಖಂಡರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ನಿಷೇಧಾಜ್ಞೆ ಇದ್ದರೂ ಕಾರ್ಯಕ್ರಮದ ಸಭಾಂಗಣದಲ್ಲೇ ಪ್ರತಿಭಟನೆ ನಡೆಸಲು ಯತ್ನಿಸಿದ ಬಿಜೆಪಿ ಮುಖಂಡರಾದ ಬೋಪಯ್ಯ, ಅಪ್ಪಚ್ಚು ರಂಜನ್, ಸುನೀಲ್ ಸುಬ್ರಹ್ಮಣ್ಯ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಕೊಡಗು ಎಸ್'ಪಿ ರಾಜೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಗ್ಗೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶಿಸುತ್ತಾ ಸಭಾಂಗಣಕ್ಕೆ ನುಗ್ಗಲು ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಮಂಡ್ಯದಲ್ಲಿ ಬಿಗಿಬಂದೋಬಸ್ತ್:
ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ತಾಲೂಕುಗಳಾದ ಶ್ರೀರಂಗಪಟ್ಟಣ, ಕೆ.ಆರ್.ಪೇಟೆ,ಪಾಂಡವಪುರ, ಮಂಡ್ಯ ಸೇರಿ ಹಲವೆಡೆ ಹೆಚ್ಚಿನ‌ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾನೆಯಿಂದಲೇ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ.‌ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ಹಲವು ಹಿಂದು ಮತ್ತು ಬಿಜೆಪಿ ಮುಖಂಡರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಇಂದು ಶ್ರೀರಂಗಪಟ್ಟಣ ಬಂದ್'ಗೆ ಕರೆ ನೀಡಿರೋ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೆ ಗುಂಬಜ್ ಮತ್ತು ಜಾಮೀಯ ಮಸೀದಿಗೆ ಹೆಚ್ವಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಯಾದಗಿರಿಯಲ್ಲಿ ಪ್ರತಿಭಟನೆ:
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಇಲ್ಲಿಯ ಸುಭಾಷ್ ಸರ್ಕಲ್'ನಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆಯ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದಲ್ಲಿ ಕಟ್ಟೆಚ್ಚರ:
ಚಿತ್ರದುರ್ಗದಲ್ಲೂ ಬಾರೀ ಬಿಗಿ ಬಂದೋಬಸ್ತ್ ನಡುವೆ ನಗರದ ಮಾಧ್ಯಮಿಕ ಶಾಲೆ ಆವರಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಸಜ್ಜಿತ ವೇದಿಕೆಯನ್ನ ಜಿಲ್ಲಾಡಳಿತ ನಿರ್ಮಸಿದ್ದು ಎಲ್ಲೆಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಕಳೆದ ಮೂರು ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಅರೆ ಸೇನಾಪಡೆ , ವಿಶೇಷ ತುಕಡಿಗಳು ವ್ಯಾಪಕ ಕಟ್ಟೆಚ್ಚರ ವಹಿಸಿವೆ. ಬಿಜೆಪಿ ಪಕ್ಷ ಕರಾಳ ದಿನವನ್ನ ಆಚರಿಸೋ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಇದೇ ವೇಳೆ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಅಲ್ಲಲ್ಲಿ ಟಿಪ್ಪು ಜಯಂತಿ ಆಚರಣೆ ವಿರುದ್ಧ ಪ್ರತಿಭಟನೆಗಳು ನಡೆದ ಬಗ್ಗೆ ವರದಿಗಳಾಗಿವೆ.

click me!