
ಶ್ರೀನಗರ(ಅ. 30): ಹೆಚ್ಚಿನ ಸ್ವಾಯತ್ತತೆ ಬೇಕೆಂಬ ಕೂಗು ಕಣಿವೆ ರಾಜ್ಯದಲ್ಲಿ ಬಲಗೊಳ್ಳುತ್ತಿದೆ. ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಈ ಕೂಗಿಗೆ ಧ್ವನಿಗೂಡಿಸಿದ್ದಾರೆ. ಕಾಶ್ಮೀರಕ್ಕೆ ಇನ್ನಷ್ಟು ವಿಶೇಷ ಸ್ಥಾನಮಾನ ನೀಡುವುದು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಒಮರ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ನೀಡಿರುವ ಸೌಲಭ್ಯವನ್ನಷ್ಟೇ ನಾವು ಕೇಳುತ್ತಿದ್ದೇವೆ. ಅದರಲ್ಲೇನು ತಪ್ಪು ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಿಂದಲ್ಲ, ಭಾರತದಿಂದ ಬೇಕು:
"ಸಂವಿಧಾನವೇ ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆಯ ಅಧಿಕಾರವನ್ನು ನೀಡಿದೆ. ಅದರ ಬಗ್ಗೆ ಮಾತನಾಡುವುದು ದೇಶದ್ರೋಹ ಎಂದು ಹೇಳುವುದಾದರೆ, ಆ ಹಣೆಪಟ್ಟಿ ಕಟ್ಟಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ" ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
"ನಾವು ಪಾಕಿಸ್ತಾನದಿಂದ ಸ್ವಾಯತ್ತತೆ ಅಧಿಕಾರ ಪಡೆಯಬೇಕಿಲ್ಲ. ರಷ್ಯಾ ಅಥವಾ ಬ್ರಿಟನ್'ನಿಂದ ಪಡೆಯಬೇಕಿಲ್ಲ. ಭಾರತದ ಸಂವಿಧಾನದಿಂದ ನಮಗೆ ಸಿಗಬೇಕು. ಸಂವಿಧಾನದಲ್ಲಿ ಈಗಾಗಲೇ ಹೇಳಿರುವ ಸ್ವಾಯತ್ತತೆಯನ್ನೇ ನಾವು ಬಯಸುತ್ತಿರುವುದು" ಎಂದೂ ಮಾಜಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಹೋಲಿಕೆ ಬೇಡ:
"ಜಮ್ಮು-ಕಾಶ್ಮೀರವನ್ನು ನೀವ್ಯಾಕೆ ಗುಜರಾತ್, ಹರಿಯಾಣ, ತಮಿಳುನಾಡಿಗೆ ಹೋಲಿಕೆ ಮಾಡುತ್ತಲೇ ಇರುತ್ತೀರಿ..? ಜಮ್ಮು-ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳಲಾಯಿತೇ ಹೊರತು ಅದು ವಿಲೀನವಾಗಿಲ್ಲ. ಹೀಗಾಗಿ, ಜಮ್ಮು-ಕಾಶ್ಮೀರವನ್ನು ಭಾರತದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ... ನಮಗೆ ನಮ್ಮದೇ ಐಡೆಂಟಿಟಿ ಇದೆ, ನಮ್ಮದೇ ಸಂವಿಧಾನವಿದೆ, ನಮ್ಮದೇ ಧ್ವಜವಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಲಾಗುವುದಿಲ್ಲ" ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಕಾಶ್ಮೀರಿಗಳಿಗೆ ಹೆಚ್ಚಿನ ಸ್ವಾಯತ್ತತೆ ಸಿಗಬೇಕೆಂಬ ಅರ್ಥದಲ್ಲಿ ಅಭಿಪ್ರಾಯ ಮಂಡಿಸಿದ್ದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆ ಕೊಟ್ಟರೆ ದೇಶದ ಹಿತಾಸಕ್ತಿಗೆ ಮಾರಕವಾಗುತ್ತದೆ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಒಮರ್ ಅಬ್ದುಲ್ಲಾ ಇಂದು ಈ ಹೇಳಿಕೆ ನೀಡಿದ್ದಾರೆ.
ಪ್ರೀತಿ ಕಸಿದಿರಿ:
ಇನ್ನು, ಒಮರ್ ತಂದೆ ಫಾರೂಕ್ ಅಬ್ದುಲ್ಲಾ ಕೂಡ ಮಗನ ಮಾತಿಗೆ ಧ್ವನಿಗೂಡಿಸಿದ್ದಾರೆ. ಅಷ್ಟೇ ಅಲ್ಲ, ಕಾಶ್ಮೀರೀ ಜನರ ಭಾವನೆಗಳನ್ನು ಭಾರತ ಸರಕಾರ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವು(ಕಾಶ್ಮೀರಿಗಳು) ಪ್ರೀತಿಯಿಂದ ನಿಮ್ಮನ್ನು(ಭಾರತ) ಸೇರಿದೆವು. ಆದರೆ, ನೀವು ನಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅದನ್ನೇ ನೀವು ನಮ್ಮಿಂದ ಕಿತ್ತುಕೊಂಡಿದ್ದೂ ಅಲ್ಲದೇ, ನಮ್ಮ ಪರವಾಗಿ ಯಾಕೆ ಘೋಷಣೆ ಕೂಗೋದಿಲ್ಲವೆಂದು ನಮ್ಮನ್ನೇ ಕೇಳುತ್ತೀರಿ. ನೀವು ಅವರ ಹೃದಯ ಗೆಲ್ಲಬೇಕಾದರೆ ಅವರಿಗೆ ನೀವು ಸ್ವಾಯತ್ತತೆ ಕೊಡಬೇಕಾಗುತ್ತದೆ," ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.