ಇಂದಿರಾ ಕ್ಯಾಂಟೀನ್'ನಲ್ಲಿ ಕನ್ನಡ ಡಿಂಡಿಮ

Published : Oct 30, 2017, 05:27 PM ISTUpdated : Apr 11, 2018, 01:12 PM IST
ಇಂದಿರಾ ಕ್ಯಾಂಟೀನ್'ನಲ್ಲಿ ಕನ್ನಡ ಡಿಂಡಿಮ

ಸಾರಾಂಶ

ರಾಜ್ಯ ಸರ್ಕಾರವು ಬಡವರಿಗೆ ಕಡಿಮೆ ದರದಲ್ಲಿ ಊಟ ಒದಗಿಸಲು ಆರಂಭಿಸಿರುವ ಮಹತ್ವಾಕಾಂಕ್ಷಿ  'ಇಂದಿರಾ ಕ್ಯಾಂಟೀನ್' ಯೋಜನೆಯು ಇನ್ನು ಮುಂದೆ ಕನ್ನಡ ಉಳಿಸಿ- ಬೆಳೆಸುವ ಕಾಯಕಕ್ಕೂ ಮುಂದಾಗಲಿದೆ. ನಗರದ 198 ಇಂದಿರಾ ಕ್ಯಾಂಟೀನ್’ಗಳನ್ನೂ `ಕನ್ನಡಮಯ' ಮಾಡಲು ಸಜ್ಜಾಗಿರುವ ಬಿಬಿಎಂಪಿಯು ಪ್ರತಿ ಕ್ಯಾಂಟೀನ್ ಆವರಣದಲ್ಲೂ ಕನ್ನಡ ಭಾಷೆ, ಇತಿಹಾಸ, ಕನ್ನಡ ಸಾಹಿತಿಗಳ ಪರಿಚಯ, ಕನ್ನಡದ ಜನಪ್ರಿಯ ಬರಹಗಳು ಬಗ್ಗೆ ಪರಿಚಯಿಸುವ ಜೊತೆಗೆ ಇವುಗಳನ್ನು ಆಂಗ್ಲ ಭಾಷೆಯಲ್ಲಿ ತಿಳಿಸುವ ಕೆಲಸ ಮಾಡಲಿದೆ.

ಬೆಂಗಳೂರು (ಅ.30): ರಾಜ್ಯ ಸರ್ಕಾರವು ಬಡವರಿಗೆ ಕಡಿಮೆ ದರದಲ್ಲಿ ಊಟ ಒದಗಿಸಲು ಆರಂಭಿಸಿರುವ ಮಹತ್ವಾಕಾಂಕ್ಷಿ  'ಇಂದಿರಾ ಕ್ಯಾಂಟೀನ್' ಯೋಜನೆಯು ಇನ್ನು ಮುಂದೆ ಕನ್ನಡ ಉಳಿಸಿ- ಬೆಳೆಸುವ ಕಾಯಕಕ್ಕೂ ಮುಂದಾಗಲಿದೆ. ನಗರದ 198 ಇಂದಿರಾ ಕ್ಯಾಂಟೀನ್’ಗಳನ್ನೂ `ಕನ್ನಡಮಯ' ಮಾಡಲು ಸಜ್ಜಾಗಿರುವ ಬಿಬಿಎಂಪಿಯು ಪ್ರತಿ ಕ್ಯಾಂಟೀನ್ ಆವರಣದಲ್ಲೂ ಕನ್ನಡ ಭಾಷೆ, ಇತಿಹಾಸ, ಕನ್ನಡ ಸಾಹಿತಿಗಳ ಪರಿಚಯ, ಕನ್ನಡದ ಜನಪ್ರಿಯ ಬರಹಗಳು ಬಗ್ಗೆ ಪರಿಚಯಿಸುವ ಜೊತೆಗೆ ಇವುಗಳನ್ನು ಆಂಗ್ಲ ಭಾಷೆಯಲ್ಲಿ ತಿಳಿಸುವ ಕೆಲಸ ಮಾಡಲಿದೆ.

ಪ್ರಸ್ತುತ ನಗರದ 198 ವಾರ್ಡ್’ಗಳಲ್ಲೂ ಇಂದಿರಾ ಕ್ಯಾಂಟೀನ್ ಮಾಡಲಾಗುತ್ತಿದೆ. ಈಗಾಗಲೇ 100ಕ್ಕೂ ಹೆಚ್ಚು ಕ್ಯಾಂಟೀನ್’ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಪ್ರತಿ ಕ್ಯಾಂಟೀನ್ನಲ್ಲೂ ದಿನಕ್ಕೆ 1,500 ಮಂದಿಗೆ ಊಟ-ಉಪಾಹಾರ ಒದಗಿಸುವುದಾಗಿ ಬಿಬಿಎಂಪಿ ಹೇಳಿದೆ. ಇದರ ಪ್ರಕಾರ ಪ್ರತಿ ನಿತ್ಯ 2.97 ಲಕ್ಷ ಸಾರ್ವಜನಿಕರು ಕ್ಯಾಂಟೀನ್’ಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಕನ್ನಡದ ಪ್ರಚಾರಕ್ಕೆ ಕ್ಯಾಂಟೀನ್ ಗಳನ್ನು ವೇದಿಕೆಯಾಗಿ ಬಳಸಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ.

ಕನ್ನಡ ಕಟ್ಟುವ ಕೈಂಕರ್ಯ: ದೇಶದ ಎಲ್ಲಾ ಭಾಷೆಗಳಿಗಿಂತಲೂ ಕನ್ನಡ ಭಾಷೆ ಮಹತ್ವವಾದುದು. ಹೀಗಾಗಿ ಕನ್ನಡ ಭಾಷೆಯನ್ನು ಬಿಬಿಎಂಪಿ ಆಡಳಿತದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇದಲ್ಲದೆ ನಗರದಲ್ಲಿ ಇಂಗ್ಲೀಷ್’ನಲ್ಲಿರುವ ಹಲವು ಪ್ರಮುಖ ರಸ್ತೆಗಳ ಹೆಸರನ್ನು ಕನ್ನಡಕ್ಕೆ ಬದಲಿಸಿ ನಾಮ-ಫಲಕ ಅಳವಡಿಕೆ ಮಾಡಲು ಮುಂದಾಗಿದ್ದೇವೆ. ಜತೆಗೆ ಕನ್ನಡ ಅಭಿವೃದ್ಧಿ ಪ್ರಾಕಾರದ ಸೂಚನೆಯಂತೆ ಎಲ್ಲಾ ಅಂಗಡಿ ಮುಂಗಟ್ಟು ಮತ್ತಿತರ ಕಡೆ ಇಂಗ್ಲಿಷ್ ಭಾಷೆಗಿಂತಲೂ ಹೆಚ್ಚು ಗಾತ್ರದಲ್ಲಿ ಕನ್ನಡದಲ್ಲಿ ಅಂಗಡಿಗಳ ಹೆಸರು ಹಾಗೂ ಜಾಹಿರಾತುಗಳು ಮುದ್ರಣಗೊಳ್ಳಬೇಕು ಎಂದು ಎಲ್ಲಾ ಜಂಟಿ ಆಯುಕ್ತರಿಗೆ ಸುತ್ತೋಲೆ ಮೂಲಕ ಆದೇಶ ನೀಡಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ `ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಇದರ ಜತೆಗೆ ಕನ್ನಡ ಕಟ್ಟುವ ಕೈಂಕರ್ಯಕ್ಕೆ ಇಂದಿರಾ ಕ್ಯಾಂಟೀನ್’ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ ತಿಂಗಳಲ್ಲೇ ಈ ಬಗೆಗಿನ ರೂಪುರೇಷೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗುವುದು. ಈ ಮೂಲಕ ಶಾಸ್ತ್ರೀಯ  ಸ್ಥಾನಮಾನ ಹಾಗೂ ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಭಾಷೆಗೆ ಬಿಬಿಎಂಪಿಗೆ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ. ನಗರಕ್ಕೆ ಬರುವ ಅನ್ಯ ಭಾಷಿಕರಿಗೂ ಕನ್ನಡದ ಮಹತ್ವ ಗೊತ್ತಾಗಬೇಕು. ಬೆಂಗಳೂರು ನಗರದಲ್ಲಿ ಒಂದು ಕೋಟಿ ಜನಸಂಖ್ಯೆ ಇದ್ದು ನಿತ್ಯ 10 ಲಕ್ಷ ಮಂದಿ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಬೆಂಗಳೂರಿಗೆ ಬಂದು ಹೋಗುತ್ತಾರೆ. ಜತೆಗೆ ಕೆಲಸಕ್ಕಾಗಿ ಲಕ್ಷಾಂತರ ಮಂದಿ ಅನ್ಯ ರಾಜ್ಯದವರು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ. ಅಂತಹವರಿಗೆ ಕನ್ನಡದ ಇತಿಹಾಸ ತಿಳಿಯಬೇಕು. ಕನ್ನಡಕ್ಕೆ ಭವ್ಯ ಇತಿಹಾಸವಿದ್ದು ಇದನ್ನು ತಿಳಿದವರಿಗೆ ನಮ್ಮ ಭಾಷೆಯ ಬಗ್ಗೆ ಗೌರವ ಹೆಚ್ಚಾಗುತ್ತದೆ. ಹೀಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಪ್ರಸಾದ್ ತಿಳಿಸಿದರು.

  ವರದಿ: ಶ್ರೀಕಾಂತ್  ಗೌಡಸಂದ್ರ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ
ಕಲಾಂಗೂ ಮುನ್ನ ರಾಷ್ಟ್ರಪತಿ ಹುದ್ದೆಗೆ ವಾಜಪೇಯಿ ಹೆಸರು!