ಶಬರಿಮಲೆ ದೇಗುಲ ಶುದ್ಧೀಕರಣ| ಅರ್ಚಕರು ರಾಜೀನಾಮೆ ಕೊಡಲಿ: ಸಿಎಂ ಪಿಣರಾಯಿ

By Web DeskFirst Published Jan 4, 2019, 4:44 PM IST
Highlights

ದೇಗುಲ ಸ್ವಚ್ಛಗೊಳಿಸಿದ ಅರ್ಚಕರ ವಿರುದ್ಧ ನ್ಯಾಯಾಂಗ ನಿಂದನೆ ದೂರು| ಮುಖ್ಯ ಅರ್ಚಕ ರಾಜೀನಾಮೆ ನೀಡಬೇಕಿತ್ತು: ವಿಜಯನ್‌

ಶಬರಿಮಲೆ[ಜ.04]: ಬಿಂದು ಹಾಗೂ ಕನಕದುರ್ಗ ಇಬ್ಬರು ಮಹಿಳೆಯರು ಬುಧವಾರ ದೇಗುಲ ಪ್ರವೇಶಿಸಿದರು ಎಂಬ ಕಾರಣಕ್ಕೆ, ದೇಗುಲದ ಬಾಗಿಲು ಹಾಕಿ, ಅದನ್ನು ಸ್ವಚ್ಛಗೊಳಿಸಿದ ಶಬರಿಮಲೆಯ ಅಯ್ಯಪ್ಪ ದೇಗುಲದ ಮುಖ್ಯ ಅರ್ಚಕರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲಾಗಿದೆ. ಅದರೆ ಈ ಅರ್ಜಿಯ ತ್ವರಿತ ವಿಚಾರಣೆಗೆ ಕೋರ್ಟ್‌ ನಿರಾಕರಿಸಿದೆ.

ಎಲ್ಲಾ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತಾನು ಸೆ.28ರಂದು ನೀಡಿದ್ದ ತೀರ್ಪುನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಜ.22ಕ್ಕೆ ನಿಗದಿಯಾಗಿದೆ. ಅದೇ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನೂ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಹೇಳಿತು.

ಕೇರಳ ಉದ್ವಿಗ್ನ: ಬಿಜೆಪಿ ಕಚೇರಿಗೆ ಕಮ್ಯುನಿಸ್ಟ್ ಕಾರ್ಯಕರ್ತರಿಂದ ಬೆಂಕಿ!

ಬುಧವಾರ ಬಿಂದು ಮತ್ತು ಕನಕದುರ್ಗ ಎಂಬಿಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ ಬಳಿಕ, ದೇಗುಲದ ಮುಖ್ಯ ಅರ್ಚಕರಾದ ಕಂದರಾರು ರಾಜೀವರು, ದೇಗುಲದ ಬಾಗಿಲನ್ನು ಮುಚ್ಚಿ, ಅಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆಸಿದ್ದರು. ಇದನ್ನು ವಿರೋಧಿಸಿ, ಗುರುವಾರ ವರ್ಷಾ ಮತ್ತು ಗೀನಾ ಕುಮಾರಿ ಎಂಬಿಬ್ಬರು ಮುಖ್ಯ ಅರ್ಚಕರ ವಿರುದ್ಧ ನ್ಯಾಯಾಂಗ ನಿಂದನ ದೂರು ದಾಖಲಿಸಿದ್ದರು.

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ

ಮುಖ್ಯ ಅರ್ಚಕ ರಾಜೀನಾಮೆ ನೀಡಬೇಕಿತ್ತು: ವಿಜಯನ್‌

ಶಬರಿಮಲೆಯ ಮುಖ್ಯ ಅರ್ಚಕರು, ದೇವಾಲಯದಲ್ಲಿ ಮಹಿಳಾ ಪ್ರವೇಶ ಆದ ನಂತರ ಶುದ್ಧೀಕರಣ ಕಾರ್ಯ ಕೈಗೊಂಡ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಕ್ರೋಶ ವ್ಯಕ್ತಪಡಿಸಿದ್ದು, ‘ಇದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ಕೋರ್ಟ್‌ ತೀರ್ಪು ಅವರಿಗೆ ಒಪ್ಪಿಗೆ ಆಗದೇ ಹೋಗಿದ್ದರೆ ರಾಜೀನಾಮೆ ನೀಡಬೇಕಿತ್ತು’ ಎಂದಿದ್ದಾರೆ.

ಇಬ್ಬರು ಮಹಿಳೆಯರ ಪ್ರವೇಶ : ಶಬರಿಮಲೆ ದೇಗುಲ ಬಂದ್..?

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನ್‌, ‘ಕೋರ್ಟ್‌ ವಿಚಾರಣೆ ವೇಳೆ ಅರ್ಚಕರು ಕೂಡ ಪಕ್ಷಗಾರರಾಗಿದ್ದರು. ಹೀಗಾಗಿ ತೀರ್ಪು ಅವರಿಗೆ ನೇರವಾಗಿ ಅನ್ವಯಿಸುತ್ತದೆ. ಮಹಿಳಾ ಪ್ರವೇಶದ ವಿರುದ್ಧ ಅವರು ಶುದ್ಧೀಕರಣ ಕೈಗೊಂಡಿದ್ದು, ಅಚ್ಚರಿಯ ವಿಷಯವಾಗಿದ್ದು, ಇದು ಕೋರ್ಟ್‌ ತೀರ್ಪಿನ ಉಲ್ಲಂಘನೆ’ ಎಂದರು. ಈ ನಡುವೆ ದಿಲ್ಲಿಯ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಮಹಿಳಾ ಅಸೋಸಿಯೇಶನ್‌ ಕೂಡ ಶುದ್ಧೀಕರಣ ಕಾರ್ಯವನ್ನು ಖಂಡಿಸಿದೆ.

click me!