ರಾಮ ಮಂದಿರಕ್ಕಾಗಿ ವಿಹಿಂಪ ಅಭಿಯಾನ

By Web DeskFirst Published Nov 14, 2018, 7:31 AM IST
Highlights

ಶ್ರೀರಾಮ ಮಂದಿರ ನಿರ್ಮಾಣ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿರುವ ನಡುವೆಯೇ ಈ ಸಂಬಂಧ ಮತ್ತೊಂದು ಸುತ್ತಿನ ಹೋರಾಟ ರೂಪಿಸಲು ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಮುಂದಾಗಿದೆ. 

ಮಂಗಳೂರು/ಹುಬ್ಬಳ್ಳಿ :  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿರುವ ನಡುವೆಯೇ ಈ ಸಂಬಂಧ ಮತ್ತೊಂದು ಸುತ್ತಿನ ಹೋರಾಟ ರೂಪಿಸಲು ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಮುಂದಾಗಿದೆ. 

ನ್ಯಾಯಾಲಯದ ತೀರ್ಪಿಗಾಗಿ ಕಾಯದೆ, ಶೀಘ್ರ ಅಧ್ಯಾದೇಶ ಹೊರಡಿಸಿ ಹಿಂದೂ ಸಮಾಜದ ದಶಕಗಳ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಹಿಂಪ ನಿರ್ಧರಿಸಿದೆ. ಈ ಸಂಬಂಧ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾಧು-ಸಂತರ ನೇತೃತ್ವದಲ್ಲಿ ಬೃಹತ್‌ ಜನಾಗ್ರಹ ಸಭೆ ಆಯೋಜಿಸಲು ತೀರ್ಮಾನಿಸಿದೆ.

ರಾಮಮಂದಿರ ಹೋರಾಟದ ಮೊದಲ ಭಾಗವಾಗಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನ.18, ನಂತರ 25ರಂದು ಬೆಂಗಳೂರು, ಹುಬ್ಬಳ್ಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್‌ ಜನಾಗ್ರಹ ಸಭೆ ನಡೆಯಲಿದೆ. ಆ ಬಳಿಕ ಉಳಿದ ಜಿಲ್ಲಾ ಕೇಂದ್ರಗಳಲ್ಲೂ ಹಂತ ಹಂತವಾಗಿ ಈ ಸಭೆಗಳು ನಡೆಯಿದೆ. ಮುಂದಿನ ದಿನಗಳಲ್ಲಿ ಈ ಹೋರಾಟ ತಾಲೂಕು ಕೇಂದ್ರ, ಹಳ್ಳಿಹಳ್ಳಿಗೂ ವಿಸ್ತರಿಸುವ ಉದ್ದೇಶವನ್ನು ವಿಹಿಂಪ ಹೊಂದಿದೆ.

ಹುಬ್ಬಳ್ಳಿಯಲ್ಲಿ ವಿಹಿಂಪ ಸಂಘಟನಾ ಮಹಾಮಂತ್ರಿ ಮಿಲಿಂದ ಪರಾಂಡೆ ಹಾಗೂ ಮಂಗಳೂರಿನಲ್ಲಿ ಸಂಘಟನೆಯ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್‌ ಅವರು ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಹೋರಾಟದ ರೂಪುರೇಷಗಳ ಕುರಿತು ಮಾಹಿತಿ ನೀಡಿದ್ದಾರೆ.

ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಎಲ್ಲ ರಾಜ್ಯಗಳಲ್ಲೂ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಸಭೆಗಳು ನಡೆಯಲಿವೆ. ಕರ್ನಾಟಕದಲ್ಲಿ ನ.25ರಂದು ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಮೂರೂ ಕಡೆ ಈ ರೀತಿಯ ಸಭೆ ನಡೆಯಲಿವೆæ. ನಂತರ ತಾಲೂಕು ಮಟ್ಟದಲ್ಲೂ ಸಭೆ ಆಯೋಜಿಸುವ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಜ.31 ಮತ್ತು ಫೆ.1ರಂದು ನಡೆಯಲಿರುವ ಧರ್ಮ ಸಂಸತ್‌ನಲ್ಲಿ ರಾಮಮಂದಿರ ಕುರಿತ ಮುಂದಿನ ಹೋರಾಟಗಳ ಬಗ್ಗೆ ಸಂತರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜನಾಗ್ರಹ ಸಭೆಗಳಲ್ಲಿ ನಾಡಿನ ಸಂತರು, ಸನ್ಯಾಸಿಗಳು, ಸಮಾಜದ ಗಣ್ಯರು, ಅಸಂಖ್ಯ ರಾಮಭಕ್ತರು ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ನಡೆದ ಸಂತರ ಸಭೆಯಲ್ಲಿ ತೀರ್ಮಾನಿಸಿದಂತೆ ದೇಶದ 500 ಕಡೆ ರಾಮಮಂದಿರ ನಿರ್ಮಾಣಕ್ಕಾಗಿ ಈ ರೀತಿಯ ಸಭೆಗಳು ನಡೆಯಲಿವೆ. ಡಿಸೆಂಬರ್‌ನಲ್ಲಿ ಸಾವಿರಾರು ಹಳ್ಳಿಗಳಲ್ಲಿ ಸಭೆ ಆಯೋಜನೆಗೊಳ್ಳಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದಾಗ ನಾಲ್ಕೈದು ನಿಮಿಷಗಳನ್ನು ಮಾತ್ರ ನೀಡಿದ್ದ ನ್ಯಾಯಮೂರ್ತಿಗಳು ನಮಗೆ ಇದಕ್ಕಿಂತಲೂ ಪ್ರಮುಖ ಆದ್ಯತೆಗಳಿವೆ ಎಂದು ವಿಚಾರಣೆಯನ್ನು ಜನವರಿಗೆ ಮುಂದೂಡಿದ್ದಾರೆ. ಇದರಿಂದ ಹಿಂದೂ ಸಮಾಜಕ್ಕೆ ಅವಮಾನವಾದಂತಾಗಿದೆ ಎಂದು ಇದೇ ವೇಳೆ ಪರಾಂದೆ ಹೇಳಿದರು.

ಯಾಕೆ ಈ ಸಭೆ? :  ನ್ಯಾಯಾಲಯದ ತೀರ್ಪಿಗಾಗಿ ಕಾಯದೆ ಅಧ್ಯಾದೇಶದ ಮೂಲಕ ಶೀಘ್ರ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲು.

ಎಲ್ಲೆಲ್ಲಿ ಯಾವಾಗ ಸಭೆ? :  ರಾಜ್ಯದಲ್ಲಿ ನ.25 ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ನ.30 ಕೊಡಗು, ಡಿ.2 ಉಡುಪಿ ನಂತರ ಉಳಿದ ಕಡೆ. ದೇಶದ 500 ಕಡೆ ಇದೇ ರೀತಿ ಜನಾಗ್ರಹ ಸಭೆ ನಡೆಯಲಿದೆ. ಇದಕ್ಕೂ ಮೊದಲು ನ.18ರಂದು ಕಾಸರಗೋಡು ಜಿಲ್ಲೆಯಲ್ಲಿ ಈ ರೀತಿಯ ಸಭೆ ನಡೆಯಲಿದೆ.

click me!