ಶಬರಿಮಲೆ ಮತ್ತೆ ಟೆನ್ಷನ್‌!

By Web DeskFirst Published Nov 14, 2018, 7:11 AM IST
Highlights

ನ.16ರಿಂದ ಆರಂಭವಾಗುವ ವಾರ್ಷಿಕ ಯಾತ್ರೆ ವೇಳೆ ಅಯ್ಯಪ್ಪನ ದರ್ಶನ ಪಡೆಯಲು ಎಲ್ಲ ವಯೋಮಾನದ ಮಹಿಳೆಯರಿಗೆ ನ್ಯಾಯಾಲಯದಿಂದಾಗಿ ದೊರೆತಿರುವ ಅವಕಾಶ ಮುಂದುವರಿದಿದೆ.

ನವದೆಹಲಿ/ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದರೂ, ಸ್ತ್ರೀಯರ ಪ್ರವೇಶಕ್ಕೆ ಅನುಮತಿ ಕಲ್ಪಿಸುವ ತನ್ನ ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. 

ಇದರಿಂದಾಗಿ ನ.16ರಿಂದ ಆರಂಭವಾಗುವ ವಾರ್ಷಿಕ ಯಾತ್ರೆ ವೇಳೆ ಅಯ್ಯಪ್ಪನ ದರ್ಶನ ಪಡೆಯಲು ಎಲ್ಲ ವಯೋಮಾನದ ಮಹಿಳೆಯರಿಗೆ ನ್ಯಾಯಾಲಯದಿಂದಾಗಿ ದೊರೆತಿರುವ ಅವಕಾಶ ಮುಂದುವರಿದಂತಾಗಿದೆ.

ಶಬರಿಮಲೆ ಅಯ್ಯಪ್ಪ ಯಾತ್ರೆ ಸೀಸನ್‌ ಸಂದರ್ಭದಲ್ಲಿ ದೇಗುಲ ಪ್ರವೇಶಿಸಲು ‘ನಿರ್ಬಂಧಿತ’ ವಯೋಮಾನದ 550 ಮಹಿಳೆಯರು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಮಹಿಳೆಯರ ಪ್ರವೇಶಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಭಕ್ತರು ಹೇಳುತ್ತಿದ್ದಾರೆ. ಹೀಗಾಗಿ ಯಾತ್ರೆ ವೇಳೆ ಘರ್ಷಣೆ ನಡೆಯುವ ಸಂಭವ ಹೆಚ್ಚಿದೆ.

10ರಿಂದ 50 ವರ್ಷದೊಳಗಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸುವುದಕ್ಕೆ ಅನುಮತಿ ನೀಡುವ ಸೆ.28ರ ತನ್ನ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಮ್ಮ ಕೊಠಡಿಯಲ್ಲೇ ಮಂಗಳವಾರ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳು, ಯಾವುದೇ ತಡೆಯಾಜ್ಞೆ ಹೊರಡಿಸಲು ನಿರಾಕರಿಸಿದರು. ಆದರೆ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 48 ಪುನರ್‌ ಪರಿಶೀಲನಾ ಅರ್ಜಿಗಳನ್ನು ಜ.22ರಂದು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದರು.

ವಾರ್ಷಿಕ ಅಯ್ಯಪ್ಪ ಯಾತ್ರೆ ನ.16ರಂದು ಆರಂಭವಾಗಿ, ಜ.14ರ ಸಂಕ್ರಾಂತಿ ದಿನದಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಜ.22ರಂದು ನ್ಯಾಯಾಲಯ ವಿಚಾರಣೆ ನಡೆಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಭಕ್ತಾದಿಗಳು ಹೇಳುತ್ತಿದ್ದಾರೆ.

ತಡೆ ಇಲ್ಲ:

10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸುವುದಕ್ಕೆ ನಿರ್ಬಂಧವಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ ಸೆ.28ರಂದು ಐತಿಹಾಸಿಕ ತೀರ್ಪೊಂದನ್ನು ನೀಡಿತ್ತು. ಎಲ್ಲ ವಯೋಮಾನದ ಮಹಿಳೆಯರೂ ದೇಗುಲ ಪ್ರವೇಶಿಸಬಹುದು ಎಂದು ಹೇಳಿತ್ತು. ಇದು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ ಹಲವಾರು ಮಹಿಳೆಯರು ದೇಗುಲ ಪ್ರವೇಶಕ್ಕೆ ವಿಫಲ ಯತ್ನಿಸಿದ್ದರು. ಏತನ್ಮಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿಗಳೂ ಸಲ್ಲಿಕೆಯಾಗಿದ್ದವು.

ತಮ್ಮ ಕೋಣೆಯಲ್ಲಿ ಈ ಮೇಲ್ಮನವಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ರೋಹಿನ್ಟನ್‌ ನಾರಿಮನ್‌, ಎ.ಎಂ. ಖಾನ್ವಿಲ್ಕರ್‌, ಡಿ.ವೈ. ಚಂದ್ರಚೂಡ್‌ ಹಾಗೂ ಇಂದೂ ಮಲ್ಹೋತ್ರಾ ಅವರಿದ್ದ ಪೀಠ, ಎಲ್ಲ ಮೇಲ್ಮನವಿಗಳನ್ನೂ ಜ.22ರಂದು ಸೂಕ್ತ ಪೀಠ ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಿದೆ ಎಂದು ಹೇಳಿತು. ಇದೇ ವೇಳೆ, ಸೆ.28ರ ತೀರ್ಪಿಗೆ ತಡೆಯಾಜ್ಞೆ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿತು. ಸೆ.28ರ ತೀರ್ಪಿನ ವಿರುದ್ಧ ಸುಮಾರು 48 ಮೇಲ್ಮನವಿಗಳು ಸಲ್ಲಿಕೆಯಾಗಿವೆ.

ದೊಡ್ಡ ಜಯ:  ಮೇಲ್ಮನವಿ ವಿಚಾರಣೆ ನಡೆಸುವ ಸುಪ್ರೀಂಕೋರ್ಟ್‌ ನಿಲುವನ್ನು ಶಬರಿಮಲೆ ದೇಗುಲದ ಮುಖ್ಯ ಅರ್ಚಕ ತಂತ್ರಿ ಕಂಡರಾರು ರಾಜೀವರು ಸ್ವಾಗತಿಸಿದ್ದರು. ಇದು ಬೃಹತ್‌ ಜಯ, ಅಯ್ಯಪ್ಪನ ಗೆಲುವು ಎಂದಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್‌ ನಿರ್ಧಾರದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

click me!