
ಚೆನ್ನೈ : ಸೋಮವಾರವಷ್ಟೇ ಬಿಜೆಪಿಯನ್ನು ಪರೋಕ್ಷವಾಗಿ ಹೊಗಳಿದ್ದ ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಹಿರಿಯ ನಟ ರಜನೀಕಾಂತ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ರಜನೀಕಾಂತ್, ‘ಒಬ್ಬ ವ್ಯಕ್ತಿಯ ವಿರುದ್ಧ 10 ಜನರು ಹೊಡೆದಾಡಲು ಬಂದರೆ ಆಗ ಬಲಶಾಲಿ ಯಾರು? ಒಬ್ಬ ವ್ಯಕ್ತಿ ಬಲಶಾಲಿಯೇ ಅಥವಾ ಆತನ ವಿರುದ್ಧ ಹೋರಾಡಲು ಬಂದ 10 ಜನರೇ? ಓರ್ವನ ವಿರುದ್ಧ 10 ಮಂದಿ ಯುದ್ಧ ಸಾರಿದರೆ ಬಲಶಾಲಿ ಯಾರಾಗುತ್ತಾರೆ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಈ ಮೂಲಕ, 2019ರ ಚುನಾವಣೆಗೂ ಮುನ್ನ ನರೇಂದ್ರ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚಿಸಿಕೊಳ್ಳಲು ಮುಂದಾಗಿರುವ ಕಿಚಡಿ ಪಕ್ಷಗಳಿಗೆ ರಜನಿ ಚಾಟಿ ಬೀಸಿದರು.
ಈ ನಡುವೆ ಸುದ್ದಿಗಾರರು, ‘ಬಿಜೆಪಿ ಜತೆ ನೀವು ಮೈತ್ರಿ ಮಾಡಿಕೊಳ್ತೀರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಂತರ ಈ ಬಗ್ಗೆ ನಿರ್ಧರಿಸುವೆ’ ಎಂದು ಉತ್ತರಿಸಿದರು.
ಸೋಮವಾರ ಸುದ್ದಿಗಾರರು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಮೈತ್ರಿಕೂಟ ರಚಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ, ‘ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡುವಷ್ಟುಬಿಜೆಪಿ ಕೆಟ್ಟಪಕ್ಷವೇ? ಹಾಗೆ ಅವು ಅಂದುಕೊಳ್ಳುತ್ತಿವೆ ಎಂದಾದಲ್ಲಿ ಅದು ಅವರ ದೃಷ್ಟಿಕೋನವಷ್ಟೇ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಹೊಗಳಿದ್ದರು.
ಈ ನಡುವೆ ಈ ಹೇಳಿಕೆಯ ಬಗ್ಗೆಯೂ ಉಂಟಾದ ಕೆಲವು ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ ರಜನಿ, ‘ನಾನು ಬಿಜೆಪಿಯನ್ನು ಕೆಟ್ಟಪಕ್ಷ ಎಂದಿಲ್ಲ. ವಿಪಕ್ಷಗಳ ದೃಷ್ಟಿಯಲ್ಲಿ ಆ ಪಕ್ಷ ಕೆಟ್ಟದ್ದು ಎಂದಿದ್ದೇನೆ’ ಎಂದು ಹೇಳಿದರು.
ರಾಜೀವ್ ಹಂತಕರ ಬಿಡುಗಡೆಗೆ ಬೆಂಬಲ:
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಮಾನವೀಯತೆ ದೃಷ್ಟಿಯಿಂದ ತಮ್ಮ ಬೆಂಬಲವಿದೆ ಎಂದು ಇದೇ ವೇಳೆ ರಜನಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ