ಮತ್ತೊಂದು ಚಂಡಮಾರುತ : ರಾಜ್ಯದಲ್ಲಿ ಮಳೆ - ಎಲ್ಲೆಲ್ಲಿ..?

By Web DeskFirst Published Dec 21, 2018, 11:17 AM IST
Highlights

ರಾಜ್ಯದಲ್ಲಿ ಮತ್ತೊಮ್ಮೆ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತ ಏಳುವ ಸಾಧ್ಯತೆ ಇದ್ದು, ಡಿ.22ರ ನಂತರ ಸಾಮಾನ್ಯ ಮಳೆಯಾಗಬಹುದು ಎಂದು ಕರ್ನಾಟಕ ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರತಿಳಿಸಿದೆ.

ಬೆಂಗಳೂರು :  ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತವಾಗಿ ರೂಪಗೊಳ್ಳುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದ್ದು, ಇದ​ರಿಂದಾಗಿ ಡಿ.22 ರ ನಂತರ ರಾಜ್ಯದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರತಿಳಿಸಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ‘ಪೆಥಾಯ್‌’ ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಪುದುಚರಿಯ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಮತ್ತೊಂದು ಚಂಡಮಾರುತ ಡಿ.21ಕ್ಕೆ ಕೇರಳ ಮತ್ತು ತಮಿಳುನಾಡಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ.

ರಾಜ್ಯದ ಮೇಲೆ ಚಂಡಮಾರುತದ ಅಷ್ಟೊಂದು ಪ್ರಭಾವವಿಲ್ಲ, ಡಿ.22ರ ನಂತರ ಒಂದೆರಡು ದಿನ ಮೋಡಕವಿದ ವಾತಾವರಣ ಇರಲಿದ್ದು, ದಕ್ಷಿಣ ಕರ್ನಾಟಕ ಕೆಲ ಭಾಗದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕಾರ್‌  ತಿಳಿಸಿದ್ದಾರೆ.

ಚಳಿ ಹೆಚ್ಚಾಗಲಿದೆ:  ವಾಯುಭಾರ ಕುಸಿತ ಉಂಟಾಗುವುದರಿಂದ ಬಂಗಾಳಕೊಲ್ಲಿ ಭಾಗದಿಂದ ಶೀತಗಾಳಿ ಬೀಸುವುದರಿಂದ ಮತ್ತು ಮೋಡಕವಿದ ವಾತಾವರಣ ಉಂಟಾಗುವುದರಿಂದ ಡಿ.21ರ ನಂತರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶದಲ್ಲಿ ಇಳಿಕೆಯಾಗಲಿದ್ದು, ಬೆಳಗ್ಗೆ- ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಭಾರೀ ಪ್ರಮಾಣ ಚಳಿ ಗಾಳಿ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

click me!