ಕಣ್ಣೀರು ಹಾಕಿದ ಬಿಜೆಪಿ ಹಿರಿಯ ನಾಯಕ ಅಡ್ವಾಣಿ

By Web DeskFirst Published Dec 21, 2018, 11:03 AM IST
Highlights

ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಕಣ್ಣೀರು ಹಾಕಿದ್ದಾರೆ. ಅಡ್ವಾಣಿ ಅವರು ತಮ್ಮ ಶಿಷ್ಯ ಅನಂತ್ ಕುಮಾರ್ ಅವರನ್ನು ನೆನೆದು ಅವರ ಶ್ರದ್ಧಾಂಜಲಿ ಸಭೆಗೆ ಹೋಗಬೇಕಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ಹೇಳಿ ಭಾವುಕರಾದರು. 

ನವದೆಹಲಿ :  ಸಂಘದ ಸ್ವಯಂ ಸೇವಕರಾಗಿ ಅನೇಕ ಶ್ರದ್ಧಾಂಜಲಿ ಸಭೆಗಳಿಗೆ ಹೋಗುವ ಸ್ಥಿತಿ ಬರುತ್ತದೆ. ಆದರೆ ಕೇಂದ್ರದ ಮಾಜಿ ಸಚಿವ ಅನಂತ್‌ ಕುಮಾರ್‌ ಅವರ ಶ್ರದ್ಧಾಂಜಲಿ ಸಭೆಗೆ ಹೋಗಬೇಕಾಗುತ್ತದೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ ಎಂದು ಭಾವುಕರಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕಣ್ಣೀರು ಹಾಕಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅನಂತ ಕುಮಾರ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತ್‌ ಕುಮಾರ್‌ ಅವರದ್ದು ಸುಂದರ ಮತ್ತು ಮಹಾನ್‌ ವ್ಯಕ್ತಿತ್ವ ಆಗಿತ್ತು ಎಂದು ಹೇಳಿ ಮತ್ತೆ ಗದ್ಗದಿತರಾದರು. ಅಡ್ವಾಣಿ ಕಣ್ಣೀರು ಹಾಕುತ್ತಿದ್ದಂತೆ ನೆರೆದಿದ್ದ ಸಭೆಯ ಕಣ್ಣಾಲಿಗಳು ತುಂಬಿಬಂದವು. ಕ್ಷಮಿಸಿ ನಾನು ಇನ್ನು ಮಾತು ಮುಂದುವರಿಸಲಾರೆ ಎಂದು ಅವರು ಅಷ್ಟಕ್ಕೇ ಮಾತು ನಿಲ್ಲಿಸಿದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಾತನಾಡಿ, ಒಂದು ದಿನ ಅನಂತ್‌ ಕುಮಾರ್‌ ನನ್ನ ಬಳಿ ಬಂದು ನಿಮ್ಮನ್ನು ನೋಡಿದಾಗ ನನ್ನ ತಾಯಿಯನ್ನು ನೋಡಿದಂತೆ ಆಗುತ್ತದೆ, ನಿಮ್ಮನ್ನು ಅಮ್ಮಾ ಎಂದು ಕರೆಯಲು ಅನುಮತಿ ನೀಡಬೇಕು ಎಂದರು. ನಾನು ತಾಯಿ ಎಂದು ಕರೆಯಲು ಅನುಮತಿ ಏಕೆ ಎಂದು ಅವರಲ್ಲಿ ಕೇಳಿದ್ದೆ. ಅವರು ನನ್ನ ಜೊತೆ ಕೊನೆಯ ಬಾರಿ ಮಾತನಾಡಿದಾಗ ನಾನು ನಿದ್ದೆ ಮಾಡುವೆ ಎಂದು ಹೇಳಿದ್ದರು. ಈ ಮಾತಿನ ಮರ್ಮ ನನಗೆ ಈಗ ಅರಿವಾಗುತ್ತಿದೆ ಎಂದು ಹೇಳಿದರು.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಸಚಿವ ನರೇಂದ್ರ ಸಿಂಗ್‌ ತೋಮರ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ತೃಣಮೂಲ ಕಾಂಗ್ರೆಸ್ಸಿನ ಸೌಗತಾ ರಾಯ್‌, ಕಾಂಗ್ರೆಸ್‌ ಸಂಸದೆ ಸುಪ್ರಿಯಾ ಸುಳೆ, ಡೆಪ್ಯುಟಿ ಸ್ಪೀಕರ್‌ ತಂಬಿದೊರೈ, ಸಂಸದ ಸಂಜಯ್‌ ಸಿಂಗ್‌, ಬಿಜೆಪಿಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಸಂಸದ ಕೆ.ಎಚ್‌. ಮುನಿಯಪ್ಪ, ಬಿಜು ಜನತಾ ದಳದ ಭಾರ್ತಹರಿ ಮತಾಬ…, ಟಿಆರ್‌ಎಸ್‌ನ ಜಿತೇಂದರ್‌ ರೆಡ್ಡಿ ಸಹ ನುಡಿನಮನ ಅರ್ಪಿಸಿದರು.

click me!