
ಹೊಸದಿಲ್ಲಿ: ಬಿಜೆಪಿ ಶಾಸಕರು ಮತ್ತು ಸ್ಪೀಕರ್ ಏನು ಬೇಕಾದರೂ ಮಾಡಬಹುದು ಎಂದು ತಿಳಿದಿದ್ದರು. ಜನಾದೇಶವನ್ನು ಅನರ್ಹಗೊಳಿಸಬಹುದೆಂದು ಕೊಂಡಿದ್ದರು. ಆದರೆ, ಭಾರತದಲ್ಲಿ ಪ್ರಜೆಗಳೇ ರಾಜರು, ಅಧಿಕಾರ ಅಥವಾ ಹಣದಿಂದ ದೇಶವನ್ನು ಆಳುವುದು ಅಸಾಧ್ಯ, ಎಂಬುವುದು ಸಾಬೀತಾಗಿದೆ, ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಶ್ವಾಸ ಮತ ಯಾಚಿಸುವ ಮುನ್ನವೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
'ರಾಷ್ಟ್ರ ಮಟ್ಟದಲ್ಲಿಯೂ ಪ್ರತಿಪಕ್ಷಗಳೊಂದಿಗೆ ಕೈ ಜೋಡಿಸಿ, ಬಿಜೆಪಿಯನ್ನು ಸೋಲಿಸುತ್ತೇವೆ,' ಎಂದು ರಾಹುಲ್ ಭರವಸೆ ನೀಡಿದ್ದಾರೆ.
'ಕರ್ನಾಟಕದ ವಿಧಾನಸಭೆಯಲ್ಲಿ ರಾಷ್ಟ್ರ ಗೀತೆ ಹಾಡುವ ಮುನ್ನವೇ ಬಿಜೆಪಿ ಶಾಸಕರು, ಸ್ಪೀಕರ್ ಸದನದಿಂದ ಎದ್ದು ಹೋಗಿದ್ದಾರೆ. ಆರ್‌ಎಸ್‌ಎಸ್ ಹೊರತುಪಡಿಸಿ ಯಾವುದೇ ಸಂಸ್ಥೆಗೂ ಗೌರವಿಸಬಾರದೆಂಬುವುದು ಪ್ರಧಾನಿ ಸೇರಿ ಬಿಜೆಪಿಯ ಧೋರಣೆ. ಮಾಧ್ಯಮ ಸೇರಿ, ದೇಶದ ಎಲ್ಲ ಉನ್ನತ ಸಂಸ್ಥೆಗಳ ಮೇಲೂ ಬಿಜೆಪಿ ದಾಳಿ ನಡೆಸುತ್ತಿದೆ. ದೇಶದ ಸುಪ್ರೀಂ ಕೋರ್ಟ್, ಜನರು ಹಾಗೂ ಶಾಸಕರ ಮುಂದೆ ಅವರೇನೂ ಅಲ್ಲವೆಂಬುವುದು ಇದೀಗ ಸಾಬೀತಾಗಿದೆ,' ಎಂದು ಆರೋಪಿಸಿದರು.
'ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಕೊಂಡು ಕೊಳ್ಳಲು ಅಮಿತ್ ಶಾ ಹಾಗೂ ಪ್ರಧಾನಿ ಯತ್ನಿಸಿದರು. ಭ್ರಷ್ಟಚಾರ ಮುಕ್ತ ದೇಶವನ್ನಾಗಿಸುವುದಾಗಿ ಹೇಳಿದ ಪ್ರಧಾನಿಯೇ ಭ್ರಷ್ಟಾಚಾರ ಹೆಚ್ಚಿಸಲು ಮುಂದಾಗಿದ್ದಾರೆ,' ಎಂದರು.
'ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ, ದೇಶದ ಜನರ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ನಿಲ್ಲಿಸುತ್ತೇವೆ. ದೇಶವನ್ನು ಸಕಲ ರೀತಿಯಲ್ಲಿಯೂ ರಕ್ಷಿಸಲು ಪಣ ತೊಡುತ್ತೇವೆ,' ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.