
ಹೂವಿನಹಡಗಲಿ (ನ.23): ಮಾತೃಪೂರ್ಣ ಯೋಜನೆಗೆ ಮೊಟ್ಟೆ ಸಮಸ್ಯೆ, ಟೈಯರ್ ಇಲ್ಲದ ಆಂಬ್ಯುಲೆನ್ಸ್, ನಗು ಮಗು ವಾಹನ ದುರ್ಬಳಕೆ, 100 ಹಾಸಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಪಂದಿಸದ ವೈದ್ಯರು, ಔಷಧಿಗಾಗಿ ಹೊರಗಡೆಗೆ ಚೀಟಿ, ಅಗಲೀಕರಣವಾದರೂ ಅಭಿವೃದ್ಧಿ ಕಾಣದ ರಸ್ತೆ...ಹೀಗೆ ಹತ್ತಾರು ಸಮಸ್ಯೆಗಳು ತಾಪಂ ಸಾಮಾನ್ಯ ಸಭೆಯಲ್ಲಿ ತೇಲಿ ಬಂದವು. ಇಲ್ಲಿನ ತಾಪಂ ಮಲ್ಲಿಗೆ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷ ಎಸ್. ಹಾಲೇಶ ಅಧ್ಯಕ್ಷತೆಯಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಹತ್ತಾರು ಸಮಸ್ಯೆಗಳು ಕೇಳಿ ಬಂದವು.
ಸರ್ಕಾರ ಜಾರಿಗೆ ತಂದ ಮಹತ್ವದ ಮಾತೃಪೂರ್ಣ ಯೋಜನೆಗೆ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ತಳಕಲ್ಲು ಅಂಗನವಾಡಿ ಕೇಂದ್ರದಲ್ಲಿ 14 ಕೊಳೆತ ಮೊಟ್ಟೆಗಳಿದ್ದವು, 4 ದಿನದಿಂದ ಶೇಂಗಾ ಚೆಕ್ಕಿ ಇಲ್ಲ, ಮಹಿಳೆಯರಿಗೆ ಸರಿಯಾಗಿ ಪೌಷ್ಟಿಕ ಆಹಾರ ಸಿಗುತ್ತಿಲ್ಲ, ಕೇವಲ ನಾಲ್ಕು ಗರ್ಭಿಣಿಯರು ಬಂದು ಊಟ ಮಾಡಿದ್ದಾರೆ. ಉಳಿದವರು ಯಾರು ಬಂದಿಲ್ಲ. ಯಾಕೆ ಎಂದು ಸಿಡಿಪಿಒ ರಾಮನ ಗೌಡರ ಅವರನ್ನು ತಾಪಂ ಅಧ್ಯಕ್ಷ ಎಸ್. ಹಾಲೇಶ ಪ್ರಶ್ನಿಸಿದರು.
ನಿಯಮದ ಪ್ರಕಾರ 5ರು. ಒಂದು ಮೊಟ್ಟೆಗೆ ಇದೆ. ಆದರೆ, ಮಾರುಕಟ್ಟೆಯಲ್ಲಿ 6.50 ಪೈಸೆ ಇದೆ. ಬೆಲೆ ಏರಿಕೆಯಿಂದ ಮೊಟ್ಟೆ ಪೂರೈಕೆ ಸ್ಥಗಿತವಾಗಿದ್ದು, ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ನೀಡುತ್ತಿಲ್ಲ, ಬದಲಾಗಿ ಮೊಳಕೆಯೊಡೆದ ಹೆಸರು ಕಾಳು ನೀಡಲಾಗುತ್ತಿದೆ ಎಂದು ಸಿಡಿಪಿಒ ಉತ್ತರಿಸಿದರು. ಮಾತೃಪೂರ್ಣ ಯೋಜನೆಯಲ್ಲಿ ಫಲಾನುಭವಿಗಳು ಎಷ್ಟಿದ್ದಾರೆ. ಕೆಟ್ಟು ಹೋದ ಮೊಟ್ಟೆ ನೀಡಿದರೇ ಹೇಗೆ, ಗುಣಮಟ್ಟದ ಆಹಾರ ಯಾಕೆ ಮಾಡುತ್ತಿಲ್ಲ, ತಾಲೂಕಿನ 130 ಅಂಗನವಾಡಿ ಕೇಂದ್ರದವರು ಮಾತ್ರ ಮೊಟ್ಟೆ ಖರೀದಿ ಮಾಡಿದ್ದಾರೆ. ಉಳಿದವರು ಏಕೆ ಖರೀದಿ ಮಾಡುತ್ತಿಲ್ಲವೆಂದು ಮತ್ತೆ ಅಧ್ಯಕ್ಷರು ಪಶ್ನಿಸಿದರು.
2407 ಗರ್ಭಿಣಿಯರು, 2183 ಬಾಣಂತಿ ಯರಿದ್ದಾರೆ, 547 ಮಂದಿ ಮಹಿಳೆಯರಿಗೆ ಮನೆಗೆ ಊಟ ಪೂರೈಕೆ ಮಾಡುತ್ತೇವೆ. ಮೊಟ್ಟೆ ದರ ಹೆಚ್ಚಳವಾಗಿದರೂ ಮೊಟ್ಟೆ ನೀಡಬೇಕು, ಇದಕ್ಕಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಹಣ ನೀಡುತ್ತಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ಮಾತೃಪೂರ್ಣ ಯೋಜನೆಗೆ ಮಹತ್ವ ನೀಡುತ್ತೇವೆಂದು ಸಿಡಿಪಿಒ ಸಭೆಗೆ ಉತ್ತರಿಸಿದರು. 100 ಹಾಸಿಗೆ ಆಸ್ಪತ್ರೆಯ ಆಂಬ್ಯುಲೆನ್ಸ್ ಟೈಯರ್ ಇಲ್ಲದೇ 2 ತಿಂಗಳಿನಿಂದ ನಿಂತಿದೆ. ರೋಗಿಗಳು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ನೀವು ಏನು ಮಾಡುತ್ತಿದ್ದೀರೆಂದು ಅಧ್ಯಕ್ಷ ಹಾಲೇಶ ಪ್ರಶ್ನೆಗೆ, ಟಿಎಚ್‌ಒ ಡಾ. ಬಸವರಾಜ, ಈ ಕೂಡಲೇ 100 ಹಾಸಿಗೆ ಆಸ್ಪತ್ರೆಯ ವೈದ್ಯರ ಗಮನಕ್ಕೆ ತರುತ್ತೇವೆಂದು ತಿಳಿಸಿದರು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ ತರಲು ಹೊರಗಡೆ ಚೀಟಿ ಬರೆದುಕೊಡುತ್ತಾರೆ. ವೈದ್ಯರ ಸ್ಪಂದನೆ ಇಲ್ಲ, ರಕ್ತಕ್ಕಾಗಿ ಪರದಾಡಿದರೂ ಈವರೆಗೂ ಒಬ್ಬರಿಗೂ ರಕ್ತ ಹಾಕಿರುವ ನಿದರ್ಶನಗಳಿಲ್ಲ, ಸರ್ಕಾರಿ ಆಸ್ಪತ್ರೆ ಹೀಗಾದರೇ ಬಡ ರೋಗಿಗಳ ಪರಿಸ್ಥಿತಿ ಹೇಗೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಶಿವರಾಜ ಟಿಎಚ್'ಒರನ್ನು ತರಾಟೆಗೆ ತೆಗೆದುಕೊಂಡರು. ನಗುಮಗು ವಾಹನವಿದ್ದರೂ, ಬಡ ಬಾಣಂತಿಯೊಬ್ಬಳು ಆಟೋದಲ್ಲಿ ಮನೆಗೆ ಹೋಗಿದ್ದಾರೆಂದು ಅಧ್ಯಕ್ಷರು ದೂರು ಹೇಳಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಮೊದಲು ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ತಾಪಂ ಇಒ ಇಸ್ಮಾಯಿಲ್ ಟಿಎಚ್'ಒಗೆ ಸೂಚನೆ ನೀಡಿದರು.
ಹಿರೇಹಡಗಲಿಯಲ್ಲಿ ರಸ್ತೆ ಅಗಲೀಕರಣಗೊಂಡು ವರ್ಷ ಕಳೆದರೂ ಇನ್ನು ಕಾಮಗಾರಿ ಆರಂಭಿಸಿಲ್ಲ, ವಾಹನಗಳ ಓಡಾಟದಿಂದ ನಿತ್ಯ ಧೂಳುನಿಂದ ಜನ ರೋಸಿ ಹೋಗಿದ್ದಾರೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಂದು ನೋಡಿಲ್ಲವೆಂದು ಸದಸ್ಯೆ ಶಾರದಮ್ಮ ಸಭೆ ಗಮನಕ್ಕೆ ತಂದರು. ರಸ್ತೆ ಬದಿಯಲ್ಲಿರುವ ಮರಗಳು, ವಿದ್ಯುತ್ ಕಂಬಗಳ ತೆರವುಗೊಂಡ ಆನಂತರದಲ್ಲಿ ಕಾಮಗಾರಿ ಆರಂಭಿಸುತ್ತೇವೆಂದು ಅಧಿಕಾರಿಗಳು ಹೇಳಿದರು. ಮೈಲಾರ ಏತ ನೀರಾವರಿ ಯೋಜನೆಯ ಕಾಲುವೆ ಹೂಳು ತುಂಬಿದ್ದರೂ ಅಧಿಕಾರಿಗಳು ತಿರುಗಿ ನೋಡಿಲ್ಲ, ರೈತರ ಜಮೀನಿಗೆ ನೀರು ಬರುತ್ತಿಲ್ಲ, ಬರುವ ಅನುದಾನವನ್ನು ಯಾವುದಕ್ಕೆ ವೆಚ್ಚ ಮಾಡಿದ್ದಾರೆಂದು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಉತ್ತರ ನೀಡಬೇಕೆಂದು ಸದಸ್ಯ ಎನ್. ಬಸವರಾಜ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ, 2-3 ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ಅಧಿಕಾರಿ ಉತ್ತರಿಸಿದರು.
ಇಟ್ಟಗಿಯಲ್ಲಿ ಸೋಲಾರ್ ಕಂಪನಿಯವರು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ, ನ್ಯಾಯ ಕೇಳಿದವರಿಗೆ ಪೊಲೀಸರು ದಬ್ಬಾಳಿಕೆ ಮಾಡುತ್ತಾರೆ, ಜಮೀನುಗಳಿಗೆ ದಾರಿ ಬಿಡದೇ ಕಾಮಗಾರಿ ಮಾಡುತ್ತಿದ್ದರೂ ಯಾರು ಕೇಳುತ್ತಿಲ್ಲ. ಪ್ರಶ್ನಿದವರಿಗೆ ಕೋರ್ಟ್‌ಗೆ ಹೋಗಿ ಅಂತ ಕಂಪನಿಯವರು ಹೇಳುತ್ತಿದ್ದಾರೆಂದು ಸದಸ್ಯಲೋಕಪ್ಪ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ವಾಸ್ತವ ಸಮಸ್ಯೆಯನ್ನು ತಹಸೀಲ್ದಾರ್ ಸಮ್ಮುಖದಲ್ಲಿ ಬಗೆಹರಿಸುತ್ತೇವೆಂದು ತಾಪಂ ಇಒ ಇಸ್ಮಾಯಿಲ್ ಹೇಳಿದರು. ನ. 25ರಿಂದ ಕುಡಿವ ನೀರಿಗಾಗಿ ಖಾಸಗಿ ವ್ಯಕ್ತಿಗಳ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆ ಸ್ಥಗಿತಗೊಳಿಸಬೇಕು. ಮುಂದುವರೆದರೇ ಅದಕ್ಕೆ ಗ್ರಾಪಂ ಪಿಡಿಒ ಹೊಣೆ ಎಂದು ಪಿಡಿಒಗಳಿಗೆ ತಾಪಂ ಅಧಿಕಾರಿಗಳು ಸೂಚನೆ ನೀಡಿದರು.
ಹೊಳಲು-ಹ್ಯಾರಡ, ಮೈಲಾರ-ತೋರಣಗಲ್ಲು, ಶಿವಪುರ-ವಡ್ಡಿನಹಳ್ಳಿ ತಾಂಡಾ, ಕೆ. ಅಯ್ಯನಹಳ್ಳಿ- ಮಾಗಳ, ಕೊಯಿ ಲಾರಗಟ್ಟಿ-ಸೋವೇನಹಳ್ಳಿ, ಹೊಳಗುಂದಿ-ಇಟ್ಟಗಿ ಸೇರಿದಂತೆ ಇತರೆ ರಸ್ತೆ ಡಾಂಬರ್ ಕಿತ್ತು ಹೋದರೂ ಅಧಿಕಾರಿಗಳು ದುರಸ್ತಿ ಮಾಡಿಲ್ಲವೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಎಸ್. ಹಾಲೇಶ, ಉಪಾಧ್ಯಕ್ಷ ಹೊನ್ನಪ್ಪ ಕಣವಿ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಶಿವರಾಜ, ತಾಪಂ ಇಒ ಇಸ್ಮಾಯಿಲ್ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.