ಕುಡಿಯಲೂ ಇಲ್ಲ ನೀರು : ಮುಂದುವರಿದ ಪಾಲೆಮಾಡು ಜನರ ಗೋಳು

By suvarna Web DeskFirst Published Nov 23, 2017, 10:33 AM IST
Highlights

ಮೂರ್ನಾಡು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾಲೆಮಾಡಿನಲ್ಲಿ 206 ಕುಟುಂಬಗಳು ವಾಸಿಸುತ್ತಿದೆ. ನೂತನವಾಗಿ ನಿರ್ಮಾಣಗೊಂಡಿರುವ ಕಿರು ಕುಡಿಯುವ ನೀರು ಯೋಜನೆಗೆ ಮೋಟಾರ್ ಅಳವಡಿಸಿಲ್ಲ. ಕೆಲಸ ಮಾತ್ರ ನಡೆದಿದ್ದು, ನೀರು ಸರಬರಾಜು ಮಾಡುವ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ.

ಮಡಿಕೇರಿ(ನ.23): ಪಾಲೆಮಾಡಿನ ಜನರಿಗೆ ಇನ್ನೂ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಲ್ಲ. ನೂತನವಾಗಿ ಕಿರು ನೀರಿನ ಸೌಲಭ್ಯವನ್ನು ನಿರ್ಮಾಣ ಮಾಡಿದ್ದರೂ ಸಹ ಅದು ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿ ಸಮಸ್ಯೆ ಮುಂದುವರಿದಿದೆ. ಕಳೆದ ಹತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರದಿಂದ ಇತ್ತೀಚೆಗೆ ಕಿರು ನೀರು ಸೌಲಭ್ಯ ಘಟಕ ಸ್ಥಾಪಿಸಲಾಗಿದೆ. ಆದರೆ ಇಲ್ಲಿನ ಜನರಿಗೆ ಕುಡಿಯುವ ನೀರಿನ ಗೋಳು ಮಾತ್ರ ಇನ್ನೂ ತಪ್ಪಿಲ್ಲ.

ಜಿಲ್ಲಾ ಪಂಚಾಯಿತಿ ವಿಶೇಷ ಪ್ಯಾಕೇಜ್‌'ನಿಂದ ಕಳೆದ ಮೂರು ವರ್ಷದ ಹಿಂದೆ ರು. 4 ಲಕ್ಷ ವೆಚ್ಚದಲ್ಲಿ ಕಿರು ನೀರು ಸೌಲಭ್ಯ ದೊರಕಿಸಿಕೊಡಲಾಗಿದ್ದು, ಕಳಪೆ ಕಾಮಗಾರಿಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮಸ್ಯೆ ಏನು?: ಮೂರ್ನಾಡು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾಲೆಮಾಡಿನಲ್ಲಿ 206 ಕುಟುಂಬಗಳು ವಾಸಿಸುತ್ತಿದೆ. ನೂತನವಾಗಿ ನಿರ್ಮಾಣಗೊಂಡಿರುವ ಕಿರು ಕುಡಿಯುವ ನೀರು ಯೋಜನೆಗೆ ಮೋಟಾರ್ ಅಳವಡಿಸಿಲ್ಲ. ಕೆಲಸ ಮಾತ್ರ ನಡೆದಿದ್ದು, ನೀರು ಸರಬರಾಜು ಮಾಡುವ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಈ ಬಗ್ಗೆ ಇಲ್ಲಿನ ನಿವಾಸಿಗಳು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಹಾಗೂ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದ್ದರೂ ಕುಡಿಯುವ ನೀರಿನ ಸೌಲಭ್ಯ ಮಾತ್ರ ಇದುವರೆಗೂ ತಲುಪಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ವಾರಕ್ಕೊಮ್ಮೆ ಸ್ನಾನ : ಈ ಭಾಗದಲ್ಲಿ ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು, ಮಕ್ಕಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ನಿವಾಸಿಗಳು ವಾರಕ್ಕೊಮ್ಮೆ ಸ್ನಾನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿಗೂ ಜನತೆ ಪರಿತಪಿಸುತ್ತಿದ್ದಾರೆ.

ವರದಿ: ವಿಘ್ನೇಶ್ ಎಂ. ಭೂತನಕಾಡು - ಕನ್ನಡಪ್ರಭ

click me!