ವಿಮಾನ ನಿಲ್ದಾಣದಲ್ಲಿ ಧಮ್ ಎಳೆದ ಪೈಲಟ್‌ಗೆ ದಂಡ ?

By Suvarna Web DeskFirst Published Jun 19, 2017, 10:21 PM IST
Highlights

ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ವಿಶೇಷ ವಿಮಾನದ ಪೈಲಟ್‌ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಗರೇಟ್ ಸೇದಿದಕ್ಕಾಗಿ ದಂಡವಿಧಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಹುಬ್ಬಳ್ಳಿ (ಜೂ.19):  ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ವಿಶೇಷ ವಿಮಾನದ ಪೈಲಟ್‌ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಗರೇಟ್ ಸೇದಿದಕ್ಕಾಗಿ ದಂಡವಿಧಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
 
ಹಾವೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯ ರೂಪಾನಿ ಅವರು ಅದಾನಿ ಕಂಪನಿಗೆ ಸೇರಿದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಬೆಳಗ್ಗೆ ಸುಮಾರು 9.50 ಕ್ಕೆ ವಿಮಾನ ಆಗಮಿಸಿದ ನಂತರ ರೂಪಾನಿ ಅವರು ಪಕ್ಷದ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹಾವೇರಿಯತ್ತ ಹೊರಟರು. ನಂತರ ಟರ್ಮಿನಲ್ ಕಟ್ಟಡದಿಂದ ಹೊರಬಂದ ಪೈಲಟ್, ವಿಮಾನ ನಿಲ್ದಾಣದ ಆವರಣದಲ್ಲೇ ಸಿಗರೇಟ್ ಸೇದುತ್ತ ಅತ್ತಿಂದಿತ್ತ ತಿರುಗಾಡ ತೊಡಗಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪೈಲಟ್ ವರ್ತನೆ ಕಂಡೂ ಕಾಣದಂತೆ ಇದ್ದಿದ್ದು ಅಚ್ಚರಿ ಮೂಡಿಸಿತು. ವಿಮಾನ ನಿಲ್ದಾಣದಲ್ಲಿ ಸಿಗರೇಟ್, ಮದ್ಯ, ಸೇರಿದಂತೆ ಸ್ಫೋಟಕ ವಸ್ತುಗಳನ್ನು ನಿಷೇಧಿಸಿದ್ದರೂ ಈ ಪೈಲಟ್ ಮಾತ್ರ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಬಹಿರಂಗವಾಗಿಯೇ ಸಿಗರೇಟ್ ಸೇದುತ್ತಿದ್ದರು.
 
ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಶಿವಾನಂದ ಬೇನಾಳ, ಪೈಲಟ್ ವಿರುದ್ಧ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಪೈಲಟ್‌ಗೆ ದಂಡ ವಿಧಿಸುವ ಕುರಿತು ಚಿಂತಿಸಲಾಗುತ್ತಿದ್ದು, ದಂಡದ ಮೊತ್ತ ಈವರೆಗೂ ಅಂತಿಮ ತೀರ್ಮಾನವಾಗಿಲ್ಲ. ಸಿಗರೇಟ್ ಸೇದಿರುವ ವಿಡಿಯೋವನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಸಿಗರೇಟ್ ಸೇದಿದ್ದು ಮುಖ್ಯ ಪೈಲಟೋ ಅಥವಾ ಸಹ ಪೈಲಟೋ ಎಂಬ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು.
click me!