ದಲಿತ ರಾಷ್ಟ್ರಪತಿ: ರಾಜ್ಯ ಬಿಜೆಪಿಗೆ ಲಾಭ?

By Suvarna Web DeskFirst Published Jun 19, 2017, 10:14 PM IST
Highlights

ಕೇಂದ್ರದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ ಅವರ ನಾಮಪತ್ರಕ್ಕೆ ರಾಜ್ಯದಿಂದ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ಬಿ.ಎಸ್.ಯಡಿಯೂರಪ್ಪ ಅವರೂ ಒಬ್ಬ ಸೂಚಕರಾಗಿ ಸಹಿ ಹಾಕಲಿದ್ದಾರೆ.ಇದು ಕರ್ನಾಟಕ ವಿಧಾನಸಭಾ ಚುನಾವಣೆಯ ವರ್ಷವಾಗಿದ್ದರಿಂದ ರಾಜ್ಯದ ದಲಿತ ಸಮುದಾಯದಲ್ಲಿ ಸಂದೇಶವೊಂದನ್ನು ರವಾನಿಸಿದಂತೆಯೂ ಆಯಿತು ಎಂಬ ಉದ್ದೇಶದಿಂದ ಯಡಿಯೂರಪ್ಪ ಅವರನ್ನು ರಾಮನಾಥ್ ಅವರ ನಾಮಪತ್ರಕ್ಕೆ ಸೂಚಕರನ್ನಾಗಿ ಆಯ್ಕೆ ಮಾಡಲಾಗಿದೆ.

ಬೆಂಗಳೂರು (ಜೂ.19): ಕೇಂದ್ರದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ ಅವರ ನಾಮಪತ್ರಕ್ಕೆ ರಾಜ್ಯದಿಂದ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ಬಿ.ಎಸ್.ಯಡಿಯೂರಪ್ಪ ಅವರೂ ಒಬ್ಬ ಸೂಚಕರಾಗಿ ಸಹಿ ಹಾಕಲಿದ್ದಾರೆ.ಇದು ಕರ್ನಾಟಕ ವಿಧಾನಸಭಾ ಚುನಾವಣೆಯ ವರ್ಷವಾಗಿದ್ದರಿಂದ ರಾಜ್ಯದ ದಲಿತ ಸಮುದಾಯದಲ್ಲಿ ಸಂದೇಶವೊಂದನ್ನು ರವಾನಿಸಿದಂತೆಯೂ ಆಯಿತು ಎಂಬ ಉದ್ದೇಶದಿಂದ ಯಡಿಯೂರಪ್ಪ ಅವರನ್ನು ರಾಮನಾಥ್ ಅವರ ನಾಮಪತ್ರಕ್ಕೆ ಸೂಚಕರನ್ನಾಗಿ ಆಯ್ಕೆ ಮಾಡಲಾಗಿದೆ.
 
ಯಡಿಯೂರಪ್ಪ ಅವರು ಮಂಗಳವಾರ ಸೂಚಕರಾಗಿ ಸಹಿ ಹಾಕುವ ಸಂಬಂಧ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಹುದ್ದೆಗೆ ಹಿರಿಯ ದಲಿತ ನಾಯಕ ರಾಮನಾಥ್ ಕೋವಿಂದ ಅವರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಅಚ್ಚರಿಯ ದಾಳ ಉರುಳಿಸಿರುವ ಬಿಜೆಪಿ ಹೈಕಮಾಂಡ್‌ನ ಈ ತಂತ್ರ ಮುಂಬರುವ ರಾಜ್ಯ ವಿಧಾನಸಭೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಮಂತ್ರ ಜಪಿಸುವ ಮೂಲಕ ಆ ವರ್ಗಗಳಿಗೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಿರುವುದರಿಂದ ರಾಷ್ಟ್ರಪತಿ ಹುದ್ದೆಗೆ ದಲಿತರನ್ನು ಕೂರಿಸುವುದು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಇಲ್ಲಿನ ದಲಿತರನ್ನು ಸ್ವಲ್ಪ ಮಟ್ಟಿಗಾದರೂ ಸೆಳೆಯುವಲ್ಲಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿ ಚಿಗುರೊಡೆದಿದೆ.
 
ಬಿಜೆಪಿ ದಲಿತರ ವಿರೋಧಿಯಲ್ಲ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದಲೇ ದಲಿತ ನಾಯಕರೊಬ್ಬರನ್ನು ದೇಶದ ಅತ್ಯಂತ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸಿದೆ. ಈಗಾಗಲೇ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನಾಚರಣೆ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದ್ದ ಕೇಂದ್ರ ಸರ್ಕಾರ ಇಡೀ ವರ್ಷ ಅಂಬೇಡ್ಕರ್ ಅವರ ಸ್ಮರಣೆ ಮಾಡಲು ಉದ್ದೇಶಿಸಿದೆ. ಅಲ್ಲದೆ, ಪಕ್ಷದ ಮುಖಂಡರು ದಲಿತರ ಮನೆಗಳಲ್ಲಿ ಉಪಾಹಾರ, ಭೋಜನ ಸ್ವೀಕರಿಸುವ ಮೂಲಕ ಸಮಾನತೆಯ ಸಂದೇಶ ಸಾರುವುದರಲ್ಲಿ ನಿರತರಾಗಿದ್ದಾರೆ.
 
ಕರ್ನಾಟಕದಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ‘ಜನ ಸಂಪರ್ಕ ಅಭಿಯಾನ’ ಹಮ್ಮಿಕೊಂಡಿದ್ದು, ಪ್ರತಿ ಜಿಲ್ಲೆಯಲ್ಲೂ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರು ದಲಿತರ ಮನೆಗಳಲ್ಲಿ ಉಪಾಹಾರ ಸ್ವೀಕರಿಸುವುದರ ಜತೆಗೆ ಆ ವರ್ಗದ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲೂ ದಲಿತರನ್ನು ಪಕ್ಷದತ್ತ ಸೆಳೆಯುವುದರಲ್ಲಿ ಬಿಜೆಪಿ ನಿರತವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯದ ಒಲವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೇ ಇದೆ. ಈ ಹಿಂದುಳಿದ ಮತ್ತು ದಲಿತ ವರ್ಗಗಳ ಬೆಂಬಲ ಗಳಿಸದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಬಹುಮತದಿಂದ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಅಭಿಪ್ರಾಯವನ್ನು ಸಂಘ ಪರಿವಾರದ ಮುಖಂಡರೂ ಹಿಂದೆಯೇ ಬಿಜೆಪಿ ಹೈಕಮಾಂಡ್‌ಗೆ ತಲುಪಿಸಿದ್ದಾರೆ. ಮೇಲಾಗಿ ರಾಜ್ಯ ಬಿಜೆಪಿ ನಾಯಕರಿಗೂ ಈ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಮತವನ್ನು ತಿಳಿಸಿದ್ದು, ಹಿಂದುಳಿದ ಮತ್ತು ದಲಿತ ವರ್ಗಗಳ ಮತದಾರರನ್ನು ಪಕ್ಷದತ್ತ ಸೆಳೆಯಲು ಪ್ರಯತ್ನಿಸಿ ಎಂಬ ಸಲಹೆ ನೀಡಿದ್ದಾರೆ. ಹಾಗಂತ ಬಿಜೆಪಿಗೆ ಹಿಂದುಳಿದ ಮತ್ತು ದಲಿತ ವರ್ಗಗಳ ಬೆಂಬಲ ಇಲ್ಲವೇ ಇಲ್ಲ ಎಂದಲ್ಲ. ಆದರೆ, ಈಗಿರುವ ಬೆಂಬಲ ಸಾಕಾಗದು. ಸರ್ಕಾರ ರಚಿಸಲು ಹೆಚ್ಚಿನ ಒಲವು ಬೇಕು. ಅದಕ್ಕಾಗಿ ಪಕ್ಷದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದೀಗ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ದಲಿತ ನಾಯಕ ರಾಮನಾಥ್ ಕೋವಿಂದ ಅವರನ್ನು ಆಯ್ಕೆ ಮಾಡಿರುವುದು ಮತ್ತು ರಾಮನಾಥ್ ಅವರು ಗೆಲ್ಲುವುದು ಬಹುತೇಕ ನಿಚ್ಚಳವಾಗಿದ್ದರಿಂದ ರಾಜ್ಯದಲ್ಲೂ ದಲಿತ ಸಮುದಾಯಕ್ಕೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂದು ರಾಜ್ಯ ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
click me!