ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ವಿಗ್ರಹ ತಯಾರಿಸುವ ಸಂಸ್ಥೆಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವುದಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ಬೆಂಗಳೂರು [ಆ.08]: ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ವಿಗ್ರಹ ತಯಾರಿಸುವ ಸಂಸ್ಥೆಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವುದಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಮಂಡಳಿ ಕಚೇರಿಯಲ್ಲಿ ಸಾರ್ವಜನಿಕರು, ಪೊಲೀಸ್ ಇಲಾಖೆ ಹಾಗೂ ವಿವಿಧ ಸ್ಥಳೀಯ ಪ್ರಾಧಿಕಾರಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಿಒಪಿ ವಿಗ್ರಹ ತಯಾರಿಸುವ ಸಂಸ್ಥೆಗಳ ಪರವಾನಗಿ ರದ್ದುಗೊಳಿಸುವುದು ಮಾತ್ರವಲ್ಲದೆ, ಅದರ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
undefined
ಇದೇ ವೇಳೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣ ರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ಸ್ಥಳದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವಂತೆ ಸೂಚಿಸಿದರು.
ಪಿಇಒ ಮೂರ್ತಿಗಳಲ್ಲಿರುವ ರಸಾಯನಿಕ ಬಣ್ಣಗಳು ಪ್ರಮುಖವಾಗಿ ಭೌತಿಕ ಮತ್ತು ರಾಸಾಯನಿಕ ಪದಾರ್ಥಗಳಿಂದ ಕೂಡಿರುತ್ತವೆ. ಜಲಮೂಲಗಳ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಜಲಚರಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಅಲ್ಲದೆ, ಪರಿಸರ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಜಲಮೂಲಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಆಯುಕ್ತರು, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ಪುರಸಭೆ, ತಾಲೂಕು ಮತ್ತು ಪಟ್ಟಣ ಪಂಚಾಯಿತಿಗಳಿಗೆ ಈ ಮೂಲಕ ನಿರ್ದೇಶನ ನೀಡಲಾಗುತ್ತಿದೆ ಎಂದು ಹೇಳಿದರು.
ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್ ಹಾಗೂ ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸಗಳಾದ ಹೂವು, ಹಣ್ಣು, ಬಾಳೇಕಂಬ, ಮಾವಿನ ತೋರಣಗಳನ್ನು ಮೂರ್ತಿಯಿಂದ ಪ್ರತ್ಯೇಕಿಸಿ ವಿಲೇವಾರಿ ಮಾಡುವಂತೆ ಅಗತ್ಯ ಕ್ರಮಗೊಳ್ಳಬೇಕು ಎಂದು ಸ್ಥಳೀಯ ಪ್ರಾಧಿಕಾರಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶೇಷವಾಗಿ ಬೆಂಗಳೂರು ನಗರದಲ್ಲಿರುವ ಕೆರೆಗಳು ಹಾಗೂ ಕಲ್ಯಾಣಿಗಳನ್ನು ಪ್ರತಿ ವಾರ್ಡ್‌ನಲ್ಲಿ ಗುರುತಿಸಿ ಮೂರ್ತಿಗಳ ವಿಸರ್ಜನೆಗೆ ಕ್ರಮ ಕೈಗೊಳ್ಳಬೇಕು. ವಾರ್ಡ್ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿ ಗಣೇಶ ವಿಗ್ರಹಳನ್ನು ಸೂಕ್ತ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಗರಿಷ್ಠ ಐದು ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವುದು, ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಪ್ರತಿ ಸಮಿತಿಗಳ ಹೆಸರುಗಳನ್ನು ಕಡ್ಡಾಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಅನುಮತಿ ಪಡೆದ ಸಮಿತಿಗಳಿಗೆ ನಿರ್ದಿಷ್ಟಜಲಮೂಲಗಳನ್ನು ನಿಗದಿಪಡಿಸಿ ವಿಲೇವಾರಿಗೆ ಸೂಕ್ತ ನಿರ್ದೇಶನ ನೀಡಬೇಕು. ಯಾವುದೇ ಕಾರಣಕ್ಕೂ ತಿಂಗಳುಗಳ ಕಾಲ ವಿಗ್ರಹ ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸುವಂತೆ ತಿಳಿಸಿದರು.