
ನವದೆಹಲಿ[ಆ.08]: 370 ನೇ ವಿಧಿ ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದ ಕೇಂದ್ರ ಸಕಾರ್ರ, ಭಾರತದ ಸ್ವರ್ಗವನ್ನು ಅಭಿವೃದ್ದಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಸದಾ ಬಾಂಬು ಗುಂಡುಗಳ ಸದ್ದು ಮಾತ್ರ ಕೇಳುತ್ತಿದ್ದ ಹಸಿರ ಕಣಿವೆಯಲ್ಲಿ ಅಭಿವೃದ್ದಿ ಶಕೆಗೆ ಮುನ್ನುಡಿ ಬರೆಯಲು ಕೇಂದ್ರ ನಿರ್ಧರಿಸಿದ್ದು ಒಂದು ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಪ್ರಧಾನಿ ಘೋಷಣೆ ಮಾಡುವ ಸಾಧ್ಯತೆ ಇದೆ.
370 ಹಾಗೂ 35ಎ ವಿಧಿ ರದ್ದು ಮಾಡುವ ಮೂಲಕ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಮುಖ್ಯವಾಹಿನಿಗೆ ಬಂದಿದ್ದು, ಈ ಎರಡೂ ಕೇಂದ್ರಾಡಳಿತ ಪ್ರದೇಶದ ಅಭಿವೃದ್ದಿಗೆ ಒಂದು ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರಲ್ಲಿ 2015 ನವೆಂಬರ್ನಲ್ಲಿ ಘೋಷಣೆಯಾದ ಅಪೂರ್ಣ ಅಭಿವೃದ್ಧಿ ಕಾರ್ಯಗಳೂ ಕೂಡ ಸೇರಿದ್ದು, ದರಲ್ಲಿ ಒಟ್ಟು 80,068 ಕೋಟಿ ರುಪಾಯಿ ಖರ್ಚಾಗದೇ ಉಳಿದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರವಾಸೋದ್ಯಮ ಕಾಶ್ಮೀರದ ಜೀವಾಳವಾಗಿದ್ದು, ಮೋದಿ ಸಕಾರ್ರ ಕಾಶ್ಮೀರವನ್ನು ಸ್ವಿಜರ್‌ಲೆಂಡ್ ಮಾದರಿ ಅಭಿವೃದ್ದಿ ಪಡಿಸುವುದಕ್ಕೆ ಮುಂದಾಗಿದೆ. ಇದರ ಜತೆಗೆ ಕಾಶ್ಮೀರದ ಪ್ರಮುಖ ಉದ್ಯಮ ರೇಷ್ಮೆ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಿ ಕರಕುಶಲ ಹಾಗೂ ಇತರ ಮಾಲಿನ್ಯರಹಿತ ಕೈಗಾರಿಕೆಗಳ ಅಭಿವೃದ್ದಿಗೆ ಕಾರ್ಯಸೂಚಿ ರಚಿಸಲಾಗಿದೆ. ಮಾತ್ರವಲ್ಲ ನವೆಂವರ್ ತಿಂಗಳಿನಲ್ಲಿ ಕಾಶ್ಮೀರದಲ್ಲಿ ಹೂಡಿಕೆದಾರರ ಸಮಾವೇಶ ನಡೆಸಿ ಬಂಡವಾಳ ಆಕರ್ಷಿಸುವುದಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಯೋಜನೆಯ ವಿವರಗಳ ಬಗ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೇ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿ, ಹೊಸ ಕಂಪನಿಗಳನ್ನೂ ಸೆಳೆಯಲು ಉದ್ದೇಶಿಸಿದ್ದು, ಸರ್ಕಾರಿ ಸ್ವಾಮ್ಯದ ಕೈಗಾರಿಗಳು ಕೂಡ ಕಾಶ್ಮೀರದಲ್ಲಿ ತಲೆ ಎತ್ತಲಿವೆ. ಹಸಿರು ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕಾಶ್ಮೀರದ ಸೌಂದರ್ಯಕ್ಕೆ ತೊಡಕಾಗದಂತೆ ನೋಡಿಕೊಳ್ಳುವ ಬಗ್ಗೆ ಗಮನ ಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 72 ವರ್ಷಗಳಿಂದ ಚಾಲ್ತಿಯಲ್ಲಿದ್ದ 370 ವಿಧಿ ಇತಿಹಾಸ ಸೇರುವುದರೊಂದಿಗೆ ಕಾಶ್ಮೀರಿಗಳು ಹೊರೆತುಪಡಿಸಿ ಇತರರು ಯಾರೂ ಉದ್ಯಮ ಆರಂಭಿಸುವಂತಿಲ್ಲ ಎಂಬ ಕಾನೂನು ರದ್ದಾಗಿತ್ತು. ಹೊರಗಿನವರಿಗೂ ಉದ್ಯಮ ನಡೆಸಲು ಮುಕ್ತವಾಗಿದ್ದು, ಈಗಾಗಲೇ ಹಲವು ಉದ್ಯಮಿಗಳು ಕಾಶ್ಮೀರದಲ್ಲಿ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಇದರೊಂದಿಗೆ ಪ್ರಾದೇಶಿಕ ಅಸಮತೋಲನ ನೀಗುವುದರೊಂದಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗವೂ ಸೃಷ್ಠಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.