
ನವದೆಹಲಿ [ಆ.08]: ಮೇಕೆದಾಟು ಯೋಜನೆಯ ಬಗ್ಗೆ ನದಿ ಕಣಿವೆ ಮತ್ತು ಜಲ ವಿದ್ಯುತ್ ಯೋಜನೆಗಳ ತಜ್ಞರ ಪರಿಶೀಲನಾ ಸಮಿತಿ(ಇಎಸಿ) ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮೇಕೆದಾಟು ಸಮತೋಲನ ಅಣೆಕಟ್ಟು ಮತ್ತು ಕುಡಿಯುವ ನೀರು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ವಿವರವಾಗಿ ಅಧ್ಯಯನ ನಡೆಸಿದ ಸಮಿತಿಯು ಪ್ರಸ್ತುತ ಯೋಜನೆಗೆ ಸದ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಯೋಜನೆಯ ಹೆಚ್ಚುವರಿ ಮಾಹಿತಿ ಮತ್ತು ಅಧ್ಯಯನ ಅಗತ್ಯವಿದೆ ಎಂದು ಹೇಳಿದೆ.
ಯೋಜನೆಯ ಉದ್ದೇಶ ಮತ್ತು ಹೊಣೆಗಾರಿಕೆ (ಟಿಒಆರ್)ಗೆ ಹೊಸದಾಗಿ ಅನುಮೋದನೆ ಮಾಡಲು ಇಎಸಿಗೆ ಸಾಧ್ಯವಿಲ್ಲ ಎಂದು ಜುಲೈ 19 ರಂದು ಡಾ.ಎಸ್.ಕೆ.ಜೈನ್ ನೇತೃತ್ವದಲ್ಲಿ ಇಂದಿರಾ ಪರ್ಯಾವರಣ ಭವನದಲ್ಲಿ ನಡೆದ ಸಭೆಯಲ್ಲಿ ಹೇಳಲಾಗಿದೆ.
ಯೋಜನೆಗೆ ಪರ್ಯಾಯ ಜಾಗಗಳನ್ನು ಸಮರ್ಪಕವಾಗಿ ಹುಡುಕಲಾಗಿಲ್ಲ. ಒಂದೇ ಜಾಗದಲ್ಲಿ ಎರಡು ವಿಭಿನ್ನ ಎತ್ತರದ ಅಣೆಕಟ್ಟುಗಳ ಪರ್ಯಾಯವನ್ನು ಹೇಳಲಾಗಿದೆಯೇ ಹೊರತು ಅನ್ಯ ಜಾಗಗಳ ಬಗ್ಗೆ ಅಧ್ಯಯನ ನಡೆಸಿದ ಮಾಹಿತಿಯಿಲ್ಲ. ಯೋಜನೆಗೆ 4,996 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಹೇಳಲಾಗಿದ್ದು, ಇದು ಬಹಳ ಹೆಚ್ಚಾಯಿತು ಎಂದು ಹೇಳಲಾಗಿದೆ.
ಹಾಗೆಯೇ ಯೋಜನೆಗೆ ತಮಿಳುನಾಡು ಆಕ್ಷೇಪವೆತ್ತಿದೆ. ಆದ್ದರಿಂದ ಉಭಯ ರಾಜ್ಯಗಳು ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ 9,000 ಕೋಟಿ ವೆಚ್ಚದ ಈ ಯೋಜನೆಯಲ್ಲಿ 67.16 ಟಿಎಂಸಿ ನೀರು ಸಂಗ್ರಹವಾಗಲಿದ್ದು, ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರು ಒದಗಿಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 99 ಮೀ. ಎತ್ತರದ ಅಣೆಕಟ್ಟು ಕಟ್ಟುವ ಪ್ರಸ್ತಾವನೆ ಸಲ್ಲಿಸಿದ್ದು 4,996 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದೆ ಎಂದು ತಿಳಿಸಿದೆ.
ಇಂದು ಕಾವೇರಿ ಜಲ ನಿರ್ವಹಣಾ ಮಂಡಳಿ ಸಭೆ
ಗುರುವಾರ ದೆಹಲಿಯ ಕೇಂದ್ರ ಜಲ ಮಂಡಳಿ ಕಚೇರಿಯಲ್ಲಿ ಕಾವೇರಿ ಜಲ ನಿರ್ವಹಣಾ ಮಂಡಳಿಯ ಸಭೆ ನಡೆಯಲಿದೆ. ಸಭೆಯಲ್ಲಿ ನಿರ್ವಹಣಾ ಮಂಡಳಿಯ ಮುಖ್ಯಸ್ಥರು, ಅಧಿಕಾರಿಗಳು ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.