
ಫಾರ್ಗೋ(ಅ.9): ಅದೊಂದು ಪಿಜ್ಜಾ ಶಾಪ್. ನಿತ್ಯವೂ ಅಲ್ಲಿ ನೂರಾರು ಜನ ಪಿಜ್ಜಾ ತಿನ್ನಲು ಬರುತ್ತಾರೆ. ಕೆಲವರು ಹೊಟ್ಟೆ ತುಂಬಾ ತಿಂದು ಹೋದರೆ, ದುಡ್ಡಿದ್ದೋರು ಶೋಕಿಗೆ ಅರ್ಧ ತಿಂದು ಇನ್ನರ್ಧ ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು.
ಇದಕ್ಕಾಗಿಯೇ ಕಾಯುತ್ತಿದ್ದ ಭಿಕ್ಷುಕರು ಆ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಅರ್ಧ ಪಿಜ್ಜಾ ತೋಗೊಂಡು ತಿನ್ನುತ್ತಿದ್ದರು. ಇದರಲ್ಲೇನು ವಿಶೇಷ?. ಇದು ಎಲ್ಲಾ ಕಡೆ ನಡೆಯುವ ಸಾಮಾನ್ಯ ಸಂಗತಿ ಅಂತೀರಾ?. ಇಷ್ಟೇ ಆಗಿದ್ದರೆ ಖಂಡಿತ ಇದು ಸುದ್ದಿಯಾಗುತ್ತಿರಲಿಲ್ಲ. ಬೇರೊಬ್ಬರ ಎಂಜಲು ಪಿಜ್ಜಾ ತಿನ್ನುತ್ತಿದ್ದ ಭಿಕ್ಷುಕರಿಗೆ ಪಿಜ್ಜಾ ಅಂಗಡಿ ಮಾಲೀಕ ಮಾಡಿದ್ದೇನು ಎಂಬುದೇ ಈ ಸುದ್ದಿಯ ತಿರುಳು.
ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ಮಳಿಗೆಯೊಂದನ್ನು ನಡೆಸುತ್ತಾರೆ. ಮಿಶೆಲ್ ಅಂಗಡಿಗೆ ನಿತ್ಯವೂ ನೂರಾರು ಜನ ಪಿಜ್ಜಾ ತಿನ್ನಲು ಬರುತ್ತಾರೆ. ಹಾಗೆ ಬಂದವರು ಬಿಟ್ಟು ಹೋದ ಪಿಜ್ಜಾ ಭಿಕ್ಷುಕರ ಪಾಲಿನ ಭೋಜನವಾಗುತ್ತಿತ್ತು.
ಇದನ್ನು ಗಮನಿಸಿದ ಮಿಶೆಲ್, ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
‘ನೀವೂ ನಮ್ಮಂತೆ ಮನುಷ್ಯರು, ಕಸದ ಬುಟ್ಟಿಯಲ್ಲಿ ಬಿದ್ದ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ಖಂಡಿತ ನೀವು ಯೋಗ್ಯರು. ಹಾಗಾಗಿ ಯಾವುದೇ ಸಂಕೋಚವಿಲ್ಲದೇ ನನ್ನ ಅಂಗಡಿಯೊಳಗೆ ಬಂದು ಪಿಜ್ಜಾ ತಿಂದು ಹೋಗಿ. ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನಿಸಲಾರರು’ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.