
ಇಸ್ಲಾಮಾಬಾದ್(ಜು.18): ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕೋರ್ಟ್ ನೀಡಿರುವ ತೀರ್ಪನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಐಸಿಜೆ ತೀರ್ಪು ಶ್ಲಾಘನಾರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ತೀರ್ಪನ್ನು ಸಹಜವಾಗಿ ಪಾಕ್ ಕಣ್ಣೋಟದಿಂದ ಕಂಡಿರುವ ಇಮ್ರಾನ್, ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಐಸಿಜೆ ಕುಲಭೂಷಣ್ ಜಾಧವ್ ಅವರನ್ನು ತಪ್ಪಿತಸ್ಥನಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೇ ಆತನನ್ನು ಬಿಡುಗಡೆ ಮಾಡಿ ಎಂದೂ ಆದೇಶಿಸಿಲ್ಲ. ಹೀಗಾಗಿ ಮುಂದಿನ ಕ್ರಮಗಳ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪಾಕ್ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
ಕುಲಭೂಷಣ್ ಜಾಧವ್ ಪಾಕಿಸ್ತಾನದ ಜನರ ವಿರುದ್ಧದ ಯುದ್ಧದಲ್ಲಿ ಅಪರಾಧಿಯಾಗಿದ್ದು, ಕಾನೂನಾತ್ಮಕವಾಗಿಯೇ ಆತನ ವಿರುದ್ಧದ ತನಿಖೆ ಮುಂದುವರೆಸುತ್ತೇವೆ ಎಂದು ಇಮ್ರಾನ್ ತಿಳಿಸಿದ್ದಾರೆ.
ನಿನ್ನೆ(ಜು.17) ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಪ್ರಕಟಿಸಿದ್ದ ಐಸಿಜೆ, ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿತ್ತು. ಅಲ್ಲದೇ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.