
ನವದೆಹಲಿ(ಸೆ.30): ‘ಉರಿ’ ದಾಳಿಯ ಪ್ರತಿಕಾರವಾಗಿ ದೇಶಕ್ಕೆ ಮುಳ್ಳಾಗಿದ್ದ ಉಗ್ರರ ನೆಲೆಗಳಿಗೆ ರಾತ್ರೋರಾತ್ರಿ ನುಗ್ಗಿ ಬೆಳಗಾಗುವುದರೊಳಗೆ ಅವರನ್ನು ಬಗ್ಗು ಬಡಿದು ಹಿಂದಿರುಗಿದ ಭಾರತದ ವೀರ ಯೋಧರ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಪಾಕಿಸ್ತಾನದ ಪತ್ರಿಕೆಗಳು ಮಾತ್ರ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಅಲ್ಲಿನ ಪತ್ರಿಕೆಗಳಲ್ಲಿ ಭಾರತದ ಕಾರ್ಯಾಚರಣೆಯೇ ಸುಳ್ಳು ಅಂತ ಬಿಂಬಿಸಲಾಗಿದೆ.
ಭಾರತದ ಸೇನೆ ನಡೆಸಿದ ಗುಂಡು ಹಾರಾಟಕ್ಕೆ ಪಾಕ್ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ ಎಂದು ಪಾಕ್ ಸೇನೆ ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ನಡೆಸಿದ ದಾಳಿಗೆ ತಾನು ಪ್ರತಿದಾಳಿ ನಡೆಸಿದ್ದು ಅದರಲ್ಲಿ 8 ಭಾರತೀಯ ಯೋಧರು ಹತರಾಗಿದ್ದಾರೆ. ಅಲ್ದೆ ಓರ್ವ ಭಾರತೀಯ ಯೋಧನನ್ನೂ ತನ್ನ ವಶಕ್ಕೆ ಪಡೆಯಲಾಗಿದೆ ಅಂತ ಪಾಕಿಸ್ತಾನ ಮಿಲಿಟರಿಯನ್ನು ಉಲ್ಲೇಖಿಸಿ ಪಾಕ್ ಪತ್ರಿಕೆ ಡಾನ್ ವರದಿ ಮಾಡಿದೆ.
ವಶದಲ್ಲಿರುವ ಯೋಧನನ್ನು ಚಂದುಲಾಲ್ ಚೌಹಾಣ್ ಎಂದು ಡಾನ್ ಹೇಳಿದ್ದು ಆತ ಮಹರಾಷ್ಟ್ರದವನಾಗಿದ್ದು 22 ವರ್ಷ ಹಾಗು ಆತನ ತಂದೆಯ ಹೆಸರು ಭೂಷಣ್ ಅಂತಲೂ ಹೇಳಿದೆ. ಆತನನ್ನು ಈಗ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ.ಇದಲ್ಲದೇ ಮೃತ ಭಾರತೀಯ ಯೋಧರ ಮೃತದೇಹಗಳನ್ನು ಭಾರತ ಇನ್ನೂ ತೆಗೆದುಕೊಂಡು ಹೋಗಿಲ್ಲ ಎಂದೂ ಆ ವರದಿಯಲ್ಲಿ ಹೇಳಲಾಗಿದೆ.
ಇನ್ನು ಭಾರತ ದಾಳಿ ನಡೆಸಿರುವುದು ‘ಅಪ್ರಚೋದಿತ ಮತ್ತು ಆಕ್ರಮಣಕಾರಿ ಕೃತ್ಯವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿಕೆಯನ್ನು ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ. ಆದರೆ ಎಂಟು ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿರುವ ವರದಿ ಶುದ್ಧ ಸುಳ್ಳು ಅಂತ ಭಾರತೀಯ ಸೇನೆಯ ಮೂಲಗಳು ತಿಳಿಸಿವೆ..
ಇನ್ನು ಭಾರತೀಯ ಯೋಧರ ದಾಳಿ ಹಿನ್ನೆಲೆಯಲ್ಲಿ ಇಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಸಂಪುಟ ಸಭೆ ಕರೆದಿದ್ದು ಚರ್ಚೆ ನಡೆಸಲಿದ್ದಾರೆ ಅಂತ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಒಟ್ಟಿನಲ್ಲಿ ಭಾರತೀಯ ಯೋಧರ ಸರ್ಜಿಕಲ್ ಅರ್ಥಾತ್ ನಿಖರ ದಾಳಿಗೆ ಪಾಕ್ಗೆ ‘ಉರಿ ಹತ್ತಿರೋದು ಸುಳ್ಳಲ್ಲ. ಆದ್ರೆ, ಪಾಕಿಸ್ತಾನದ ಮಾಧ್ಯಮಗಳಂತೂ ಉಗ್ರ ಸಂಹಾರ ಎಲ್ಲವೂ ಸುಳ್ಳು ಅಂತಲೇ ಹೇಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.