ಪಾಕ್ ಸೇನಾ ಮುಖ್ಯಸ್ಥರಿಂದ ಮತ್ತೆ ಯುದ್ಧದ ಮಾತು| ‘ಹಿಂದುತ್ವ ಹಾಗೂ ದೌರ್ಜನ್ಯಗಳಿಗೆ ಕಾಶ್ಮೀರ ಬಲಿಪಶುವಾಗುತ್ತಿದೆ’| ಪಾಕ್ ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೆದ್ ಬಾಜ್ವಾ ಹೇಳಿಕೆ| ಕಾಶ್ಮೀರವನ್ನು ಒಬ್ಬಂಟಿಯಾಗಿ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ ಎಂದ ಬಾಜ್ವಾ| ಗುಂಡು, ಉಸಿರಿರುವವರೆಗೂ ಕಾಶ್ಮೀರಕ್ಕಾಗಿ ಹೋರಾಡುವುದಾಗಿ ಬಾಜ್ವಾ ಸ್ಪಷ್ಟನೆ|
ಇಸ್ಲಾಮಾಬಾದ್(ಸೆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಪಾಕಿಸ್ತಾನ ಅಕ್ಷರಶ: ಗೊಂದಲದಲ್ಲಿ ಸಿಲುಕಿದೆ ಎಂಬುದಕ್ಕೆ ಹಲವು ಉದಾಹರಣೆ ಕಾಣ ಸಿಗುತ್ತವೆ.
ಮೊದಲು ಯುದ್ಧದ ಮಾತನಾಡಿ ಆ ನಂತರ ಶಾಂತಿ ಕನವರಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಂದೆಡೆ. ಅಣ್ವಸ್ತ್ರ ಯುದ್ಧ, ಭಾರತದೊಂದಿಗೆ ನೇರ ಮತ್ತು ಅಂತಿಮ ಯುದ್ಧದ ಮಾತನಾಡುತ್ತಾ ಮಾತಿನಲ್ಲೇ ಶೌರ್ಯ ಪ್ರದರ್ಶಿಸುತ್ತಿರುವ ಪಾಕ್ ಸೇನೆ ಮತ್ತೊಂದೆಡೆ.
ಕಾಶ್ಮೀರದಲ್ಲಿ ಭಾರತ ದೌರ್ಜನ್ಯವೆಸಗುತ್ತಿದ್ದು, ಹಿಂದುತ್ವಕ್ಕಾಗಿ ಕಾಶ್ಮಿರವನ್ನು ಬಲಿ ಪಡೆದಯುತ್ತಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಹೇಳಿದ್ದಾರೆ.
ಹಿಂದುತ್ವ ಹಾಗೂ ದೌರ್ಜನ್ಯಗಳಿಗೆ ಕಾಶ್ಮೀರ ಬಲಿಪಶುವಾಗುತ್ತಿದೆ. ಕಾಶ್ಮೀರ ಪಾಕಿಸ್ತಾನದ ಅಜೆಂಡಾವಾಗಿದ್ದು, ಪ್ರಸ್ತುತ ಭಾರತ ಸರ್ಕಾರ ಕಾಶ್ಮೀರ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರ ನಮಗೆ ಸವಾಲಾಗಿ ಪರಿಣಮಿಸಿದೆ ಎಂದು ಬಾಜ್ವಾ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರವನ್ನು ಒಬ್ಬಂಟಿಯಾಗಿ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ. ಪಾಕಿಸ್ತಾನದ ಕಟ್ಟಕಡೆಯ ಯೋಧ ತನ್ನಲ್ಲಿ ಗುಂಡು ಹಾಗೂ ಉಸಿರು ಇರುವವರೆಗೆ ಕಾಶ್ಮೀರಕ್ಕಾಗಿ ಹೋರಾಡುತ್ತಾನೆ ಎಂದು ಜನರಲ್ ಬಾಜ್ವಾ ಸ್ಪಷ್ಟಪಡಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಕಾಶ್ಮೀರಕ್ಕಾಗಿ ಯಾವುದೇ ಬಲಿದಾನಕ್ಕೂ ನಾವು ಸಿದ್ಧರಿರುವುವಾಗಿ ಜನರಲ್ ಬಾಜ್ವಾ ಘೋಷಿಸಿದ್ದಾರೆ.