
ಮಂಗಳೂರು : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿಚಾರದಲ್ಲಿ ವಿಪಕ್ಷ ಬಿಜೆಪಿ ಮೌನವಹಿಸಿದೆ. ಆದರೆ ರಾಜ್ಯದ ಜನತೆಯ ಹಿತದೃಷ್ಟಿಯಿಂದ ರಾಜ್ಯದ ಸೆಸ್ ಅನ್ನು ಕಡಿತಗೊಳಿಸುವ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ವಿಪರೀತ ಏರಿಕೆಯಾಗಿದೆ. ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡುವ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ಇಂಧನ ದರ ಏರಿಕೆ ವಿಚಾರದಲ್ಲಿ ಜನತೆಗೆ ಉತ್ತರ ನೀಡುತ್ತಿಲ್ಲ. ಆದರೂ ಜನತೆಯ ಹಿತದ ಸಲುವಾಗಿ ನಾನು ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಪೆಟ್ರೋಲಿಯಂ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಸಾಲಮನ್ನಾ ಷರತ್ತು ಸಡಿಲ ಬಗ್ಗೆ ಪರಿಶೀಲನೆ
ಮಂಗಳೂರು: ಸಾಲ ಮನ್ನಾ ಯೋಜನೆಗೆ ಸಂಬಂಧಿಸಿ ವಿಧಿಸಿರುವ ಷರತ್ತುಗಳನ್ನು ಬಡ ರೈತರಿಗೆ ಪ್ರಯೋಜನವಾಗುವ ಸಲುವಾಗಿ ಸಡಿಲಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಾಲಮನ್ನಾ ಯೋಜನೆಯಲ್ಲಿ ಸುಸ್ತಿದಾರರ ಖಾತೆಯಲ್ಲಿ ಠೇವಣಿ ಇದ್ದರೆ ಪೂರ್ತಿ ಮನ್ನಾ ಸೌಲಭ್ಯ ಸಿಗುವುದಿಲ್ಲ ಎಂಬ ಬಗ್ಗೆ ಖಾತೆಯಲ್ಲಿ ಹಣ ಇದ್ದರೆ ಸಾಲ ಮನ್ನಾ ಇಲ್ಲ ಎಂಬ ಶೀರ್ಷಿಕೆಯಲ್ಲಿ ಸೆ.7ರಂದು ‘ಕನ್ನಡಪ್ರಭ’ ವಿಶೇಷ ವರದಿ ಮಾಡಿತ್ತು. ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸಹಕಾರಿ ಸಂಘಗಳಲ್ಲಿ ಲಕ್ಷಗಟ್ಟಲೆ ಠೇವಣಿ ಇರಿಸಿದ ಶ್ರೀಮಂತರನ್ನು ಗುರಿಯಾಗಿಸಿ ಈ ಷರತ್ತು ವಿಧಿಸಲಾಗಿದೆ. ಆದರೆ ಇದರಿಂದ ಕಡಿಮೆ ಹಣ ಇಟ್ಟಿರುವ ಬಡ ರೈತರಿಗೆ ತೊಂದರೆಯಾಗುತ್ತದೆ ಎಂದಾದರೆ ಈ ಬಗ್ಗೆ ಪರಿಶೀಲನೆ ನಡೆಸಿ ನಿಯಮ ಸರಳೀಕರಣಗೊಳಿಸಲಾಗುವುದು ಎಂದರು.
ಡಿಆರ್‌ಡಿಎ ಸಿಬ್ಬಂದಿ ವೇತನಕ್ಕೆ ಕ್ರಮ
ಮಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತ ವಿಭಾಗದಲ್ಲಿ 5 ತಿಂಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೇತನ ಸಿಗದ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಈಗಾಗಲೇ 6 ತಿಂಗಳಿಂದ ವೇತನ ಸಿಗದೆ ಪರದಾಡುತ್ತಿರುವ 12 ಸಾವಿರ ಶಿಕ್ಷಕರಿಗೆ ಕೂಡಲೇ ವೇತನ ನೀಡುವಂತೆ ಸೂಚನೆ ನೀಡಿದ್ದೇನೆ. ಅದೇ ರೀತಿ ಡಿಆರ್‌ಡಿಎ ಇಲಾಖೆಯಲ್ಲೂ ತಕ್ಷಣ ವೇತನ ಪಾವತಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕೇಂದ್ರ ಸರ್ಕಾರ ಹಣ ನೀಡದಿದ್ದರೆ, ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಡಿಆರ್‌ಡಿಎ ಸಿಬ್ಬಂದಿಗೂ 5 ತಿಂಗಳಿಂದ ವೇತನವಿಲ್ಲ ಎಂದು ಸೆ.7ರಂದು ‘ಕನ್ನಡಪ್ರಭ’ ವಿಶೇಷ ವರದಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.