ಸರ್ಕಾರದಿಂದ ಮತ್ತೊಂದು ಹೊಸ ಆದೇಶ

By Web DeskFirst Published Sep 8, 2018, 9:46 AM IST
Highlights

ಇದೀಗ ಕರ್ನಾಟಕ ಸರ್ಕಾರ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಸರ್ಕಾರ ಕಚೇರಿಗಳಲ್ಲಿ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ನಿಷೇಧ ಮಾಡಬೇಕು ಎಂದು ಆದೇಶ ನೀಡಿದೆ. 

ಬೆಂಗಳೂರು :  ವಿಧಾನಸಭೆ ಹಾಗೂ ವಿಕಾಸಸೌಧದ ಕಚೇರಿಗಳಲ್ಲಿ ನಡೆಯುವ ಸಭೆಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳ ಬದಲಿಗೆ ಸ್ಟೀಲ್‌ ಲೋಟ ಬಳಸುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ತಟ್ಟೆ, ಬಾಟಲ್‌ ಹಾಗೂ ಲೋಟ ಬಳಕೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ತಿಂಗಳು ಆದೇಶ ಹೊರಡಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವಿಧಾನಸೌಧದ ಕಚೇರಿಗಳಲ್ಲಿ ನಡೆಸುವ ಸಭೆಗಳಲ್ಲಿ ಪ್ಲಾಸ್ಟಿಕ್‌ ಲೋಟ, ಬಾಟಲ್‌ ಬಳಸಬಾರದು. ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಮಾದರಿಯಾಗುವ ನಿಟ್ಟಿನಲ್ಲಿ ಸ್ಟೀಲ್‌ ತಟ್ಟೆಹಾಗೂ ಸ್ಟೀಲ್‌ ಲೋಟವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶ ಸಂಪೂರ್ಣ ಅನುಷ್ಠಾನಗೊಳ್ಳುವ ಮೊದಲೇ ಇದೀಗ ಸರ್ಕಾರದ ಅಧೀನ ಕಾರ್ಯದರ್ಶಿಗಳು ಮತ್ತೊಂದು ಆದೇಶ ಹೊರಡಿಸಿ ರಾಜ್ಯಾದ್ಯಂತ ಇದೇ ನಿಯಮ ಜಾರಿಗೆ ಸೂಚಿಸಿದ್ದಾರೆ.

ಸೆ.5 ರಂದು ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಸರ್ಕಾರಿ, ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸರ್ಕಾರದ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ಮಾಡಿದರೂ ಪುನರ್‌ ಬಳಕೆಗೆ ಯೋಗ್ಯವಾಗಿರುವಂತಹ ಬಾಟಲ್‌ ಬಳಸಬೇಕು. ಒಮ್ಮೆ ಮಾತ್ರ ಬಳಸಿ ಬಿಸಾಡುವ ಬಾಟಲ್‌, ತಟ್ಟೆ, ಲೋಟ ಹಾಗೂ ಕವರ್‌ಗಳು ಸೇರಿದಂತೆ ಯಾವುದೇ ಪ್ಲಾಸ್ಟಿಕ್‌ ಉತ್ಪನ್ನ ಬಳಕೆ ಮಾಡಬಾರದು.

ಸರ್ಕಾರದ ಕಚೇರಿಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲ್‌ಗಳಿಂದ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಈ ಪ್ಲಾಸ್ಟಿಕ್‌ ಬಾಟಲ್‌ ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿಯಾಗುತ್ತಿದೆ. ಬಹುತೇಕ ಬಾಟಲ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಬಳಕೆ ಮಾಡದೆ ಉಳಿದಿರುತ್ತದೆ. ಇದರಿಂದ ನೀರು ಸಹ ವ್ಯರ್ಥವಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪರವಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಸ್‌. ರೋಹಿಣಿ ಅವರು ಆದೇಶ ಮಾಡಿದ್ದಾರೆ.

click me!