ಹಿಮಮಾನವನ ಹೆಜ್ಜೆ ಜಾಡು ಅರಸುತ್ತಾ: ವಿಚಿತ್ರ ಸಂಗತಿಗಳೇ ಸಿಗುತ್ತವೆ ಕೆದಕುತ್ತಾ!

Published : Apr 30, 2019, 03:07 PM IST
ಹಿಮಮಾನವನ ಹೆಜ್ಜೆ ಜಾಡು ಅರಸುತ್ತಾ: ವಿಚಿತ್ರ ಸಂಗತಿಗಳೇ ಸಿಗುತ್ತವೆ ಕೆದಕುತ್ತಾ!

ಸಾರಾಂಶ

ಹಿಮಾಲಯದ ತಪ್ಪಲು ಪ್ರದೇಶದಲ್ಲಿದ್ದಾನಾ ಹಿಮಮಾನವ?| ಭಾರತೀಯ ಸೇನೆಯ ಪರ್ವತಾರೋಹಿ ತಂಡಕ್ಕೆ ಸೆರೆಸಿಕ್ಕ ಹಿಮಮಾನವನ ಹೆಜ್ಜೆ ಗುರುತು| ಯೇತಿ ಎಂದರೆ ಯಾರು ಗೊತ್ತಾ?| ನೇಪಾಳ ಬಳಿಯ ಮಕಾಲು ಬೇಸ್ ಕ್ಯಾಂಪ್ ಬಳಿ ಪತ್ತೆಯಾದ ಬೃಹತ್ ಹೆಜ್ಜೆ ಗುರುತು| 32X15 ಇಂಚು ಸುತ್ತಳತೆಯ ಹಿಮಮಾನವನ ಬೃಹತ್ ಹೆಜ್ಜೆ ಗುರುತು|ಯೇತಿಯ ಇತಿಹಾಸ ಕೆದಕಿದರೆ ಸಿಗುತ್ತವೆ ಕುತೂಹಲಕಾರಿ ಅಂಶಗಳು!

ಬೆಂಗಳೂರು(ಏ.30): ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡವೊಂದು ಟಿಬೆಟ್-ನೇಪಾಳ ಗಡಿಯಲ್ಲಿ ಯೇತಿ ಅಥವಾ ಹಿಮಮಾನವನ ಹೆಜ್ಜೆ ಗುರುತು ಪತ್ತೆ ಹಚ್ಚಿದೆ. ಭಾರತೀಯ ಸೇನೆಯ ಟ್ವಿಟ್ ಇದೀಗ ಯೇತಿ ಅಥವಾ ಹಿಮಮಾನವನ ಕುರಿತಾದ ಅನೇಕ ರಹಸ್ಯ ಸಂಗತಿಗಳತ್ತ ಮತ್ತೆ ಬೆಳಕು ಚೆಲ್ಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಸೇನೆ, ಬೃಹತ್ ಹೆಜ್ಜೆ ಗುರುತಿನ ಫೋಟೋ ಶೇರ್ ಮಾಡಿದೆ. 32X15 ಇಂಚು ಸುತ್ತಳತೆಯ ಈ ಹೆಜ್ಜೆ ಗುರುತು, ನೇಪಾಳ ಬಳಿಯ ಮಕಾಲು ಬೇಸ್ ಕ್ಯಾಂಪ್ ಬಳಿ ಪತ್ತೆಯಾಗಿದೆ ಎನ್ನಲಾಗಿದೆ.

ಹಿಮಮಾನವ ಅಂದರೆ ಯಾರು?:

ಹಿಮದಿಂದ ಆವೃತ್ತವಾಗಿರುವ ವಿಶ್ವದ ಹಲವು ಪರ್ವತ ಪ್ರದೇಶಗಳಲ್ಲಿ ಯೇತಿ ಎಂಬ ಹಿಮಮಾನವ ವಾಸಿಸುವ ಕುರಿತು ಆಗಾಗ ಮಾತುಗಳು ಕೇಳಿ ಬರುತ್ತವೆ. ಭಾರತದ ಹಿಮಾಲಯ ತಪ್ಪಲು ಪ್ರದೇಶದಲ್ಲೂ ಹಿಮಮಾನವನ ಅಸ್ತಿತ್ವವಿದೆ ಎಂದು ಹೇಳಲಾಗುತ್ತದೆ.

ತಾವು ಹಿಮಮಾನವರನ್ನು ನೋಡಿದ್ದಾಗಿ ಹಲವರು ವಾದಿಸುತ್ತಾರೆ. ಅಲ್ಲದೇ ಭಾರತೀಯ ಸೇನೆಯ ಸೈನಿಕರು ಕೂಡ ಹಿಮಮಾನವನನ್ನು ಕಂಡಿದ್ದಾಗಿ ಹೆಳುತ್ತಾರೆ. ಆದರೆ ಇದುವರೆಗೂ ಹಿಮಮಾನವನ ಕುರಿತು ಯಾವುದೇ ಸ್ಪಷ್ಟ ಪುರಾವೆ ದೊರೆತಿಲ್ಲ.

ಯೇತಿ ಹುಡುಕಾಟದಲ್ಲಿ:

ಯೇತಿ ಅಥವಾ ದೈತ್ಯಾಕಾರದ ಸ್ನೋಮ್ಯಾನ್​​ ಮಂಗಗಳ ಮುಖಲಕ್ಷಣ ಹೊಂದಿರುತ್ತದೆ. ಇವು ಹಿಮಾಲಯ, ಸೈಬೀರಿಯಾ, ಕೇಂದ್ರ ಮತ್ತು ಪೂರ್ವ ಏಷ್ಯಾದಲ್ಲಿ ಕಾಣಸಿಗುತ್ತದೆ ಎಂಬ ವಾದವಿದೆ. ನೇಪಾಳಿ ಜಾನಪದ ಕಥೆಗಳಲ್ಲಿ ಈ ಪ್ರಾಣಿಯ ಉಲ್ಲೇಖ ಹೆಚ್ಚಾಗಿ ಸಿಗುತ್ತದೆ.

1921ರಲ್ಲಿ ಬ್ರಿಟಿಷ್​​ ಪರ್ವತಾರೋಹಿ ಚಾರ್ಲ್ಸ್​​ ಹೋವರ್ಡ್​​ ಬರಿ, ಮೌಂಟ್​​ ಎವರೆಸ್ಟ್​​ನಲ್ಲಿ ಚಾರಣ ಮಾಡುವಾಗ ಬೃಹತ್ ಹೆಜ್ಜೆ ಗುರುತುಗಳನ್ನ ಕಂಡಿದ್ದರು. ಇದು ಮೀಟೋ ಕಾಂಗ್ಮಿ ಎಂಬ ಪ್ರಾಣಿಗೆ ಸೇರಿದ್ದು ಎಂದು ಚಾರ್ಲ್ಸ್​​ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಮೀಟೋ ಕಾಂಗ್ಮಿ ಅಂದ್ರೆ ಮಾನವ ಕರಡಿ ಅಥವಾ ಸ್ನೋಮ್ಯಾನ್ ಎಂದು ಅರ್ಥ.

ಇದಕ್ಕೂ ಮೊದಲು 1832ರಲ್ಲಿ ಜೇಮ್ಸ್​ ಪ್ರಿನ್ಸೆಪ್​​ನ ಜರ್ನಲ್ ಆಫ್ ಏಷ್ಯಾಟಿಕ್ ಸೊಸೈಟಿ ಆಫ್​ ಬೆಂಗಾಲ್​​ನಲ್ಲಿ, ಚಾರಣಿಗ ಬಿಕೆ ಹಾಡ್ಜ್​ಸನ್​​ಗೆ ಉತ್ತರ ನೇಪಾಳದಲ್ಲಿ ಆದ ಅನುಭವಗಳನ್ನ ಪ್ರಕಟಿಸಲಾಗಿದೆ. ಇದರ ಪ್ರಕಾರ ಹಾಡ್ಜ್​ಸನ್​ನ ಸ್ಥಳೀಯ ಗೈಡ್​, ಎತ್ತರದ, ಉದ್ದವಾದ ಕೂದಲುಳ್ಳ ಪ್ರಾಣಿಯನ್ನು ಕಂಡಿದ್ದಾಗಿ ಉಲ್ಲೇಖಿಲಸಾಗಿದೆ. ಆದರೆ ಆ ಗೈಡ್ ಇವು ಒರಾಂಗಟಾನ್​ ಹೆಜ್ಜೆ ಗುರುತು ಎಂದು ಹೇಳಿದ್ದ ಎನ್ನಲಾಗಿದೆ.

ಇನ್ನು 1953ರಲ್ಲಿ ಮೊದಲ ಬಾರಿಗೆ ಎವರೆಸ್ಟ್‌ ಏರಿದ್ದ ಸರ್ ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ಕೂಡ, ಪರ್ವತದ 19 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ತಾವು ಬೃಹತ್ ಹೆಜ್ಜೆ ಗುರುತುಗಳನ್ನು ಕಂಡಿದ್ದಾಗಿ ಹೇಳಿದ್ದರು.

ಬಳಿಕ 20ನೇ ಶತಮಾನದಲ್ಲಿ ಯೇತಿ ಕುರಿತು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಈ ಕುರಿತು ಹೆಚ್ಚಿನ ಸಂಶೋಧನೆಳು ನಡೆದವು. ಆದರೆ ಈವರೆಗೂ ಯಾವುದೇ ಸ್ಪಷ್ಟ ಪುರಾವೆ ಸಿಗದಿರುವುದು ಯೇತಿ ಕುರಿತಾದ ಮಾನವನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ತೀರ ಇತ್ತೀಚಿಗೆ 2007ರಲ್ಲಿ ನೇಪಾಳದ ಟೆಲಿವಿಜನ್ ಚಾನೆಲ್‌ವೊಂದು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಯೇತಿಗಳ ಬೃಹತ್ ಹೆಜ್ಜೆ ಗುರುತು ಪತ್ತೆಯಾಗಿವೆ ಎಂದು ಸುದ್ದಿ ಬಿತ್ತರಿಸಿತ್ತು.

ಯೇತಿ ಅರ್ಥ:

ಸ್ಥಳೀಯ ಶೆರ್ಪಾ ಭಾಷೆಯಲ್ಲಿ ಯೇತಿ ಎಂದೆ 'ಅಗೋ ಅಲ್ಲಿ ಕಾಣುವ ಬೃಹತ್ ಆಕಾರ' ಎಂದಾಗುತ್ತದೆ.

ಯೇತಿಗಳಿಗಿರುವ ಇತರೆ ಹೆಸರುಗಳು:

ಮಿಶೇ

ದ್ಸುತೇ

ಮಿಗೋಯ್ ಅಥವಾ ಮೀಗೋ

ಬನ್ ಮಾಂಚಿ

ಮಿರ್ಕಾ ಕಾಂಗ್​ ಆದ್ಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ