BSY ತಂತಿ ಮೇಲಿನ ನಡಿಗೆ ಹೇಳಿಕೆ: ದೆಹಲಿಯಿಂದ ಶ್ರೀರಾಮುಲು ಅನಿಸಿಕೆ

By Web DeskFirst Published Sep 30, 2019, 6:08 PM IST
Highlights

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆಯನ್ನು ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ರಾಮುಲು ಏನೆಲ್ಲ ಹೇಳಿದ್ದಾರೆ ನೋಡಿ.

ನವದೆಹಲಿ, (ಸೆ.30): ತಂತಿ ಮೇಲೆ ನಡಿಯುತ್ತಿದ್ದೇನೆ ಎನ್ನುವ ಸಿಎಂ ಯಡಿಯೂರಪ್ಪ ಅವರ ಹೇಳಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಸಮರ್ಥನೆ ಮಾಡಿಕೊಂಡಿದ್ದಾರೆ.

ಇಂದು (ಮಂಗಳವಾರ) ನವದೆಹಲಿಯಲ್ಲಿ ಮಾತನಾಡಿರುವ ರಾಮುಲು, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಸಹಜವಾಗಿ ಒತ್ತಡ ಇರುತ್ತದೆ‌. ಆ ರೀತಿ ಒತ್ತಡ ಇದ್ದರೂ ಅದನ್ನು ನಿಭಾಯಿಸುವ ಶಕ್ತಿ ಯಡಿಯೂರಪ್ಪನವರಿಗೆ ಇದೆ ಎಂದು ಸಮಜಾಯಿಸಿ ನೀಡಿದರು.

ತಂತಿಯಿಂದ ಕೆಳಗಿಳಿಸುವ ಎಚ್ಚರಿಕೆ! ಬಿಎಸ್‌ವೈ ಕಾಲೆಳೆದ ಎಚ್‌ಡಿಕೆ

ಎಲ್ಲರನ್ನೂ ನೋಡಿಕೊಂಡು ಹೋಗಬೇಕು ಅಲ್ವಾ? ಒತ್ತಡದಲ್ಲಿ ನಡೆಯುತ್ತಿರುತ್ತಾರೆ. ಕೆಲವರು ಮಂತ್ರಿಗಳು ಆಗಬೇಕೆಂದು  ಒತ್ತಡ ಹಾಕಿರಬಹುದು. ಅಲ್ದೇ ಆಡಳಿತ ವಿಚಾರದಲ್ಲಿ ಹಾಗೂ ರಾಜಕೀಯವಾಗಿ ಮುಖ್ಯಮಂತ್ರಿಗಳಿಗೆ ಒತ್ತಡ ಇರುತ್ತೆ. ಏನೇ ಒತ್ತಡ ಇದ್ದರೂ ಅದನ್ನು ಸರಿಪಡಿಸಿಕೊಂಡು ಹೋಗುವ ಶಕ್ತಿ ಅವರಿಗೆ ಇದೆ ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಯಡಿಯೂರಪ್ಪನವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇನ್ನು ಇದೇ ವೇಳೆ ಬಳ್ಳಾರಿ ವಿಭಜನೆ ಬಗ್ಗೆ ಪ್ರತಿಕ್ರಿಯಿಸಿ,  ಬಳ್ಳಾರಿ ವಿಭಜನೆ ಬಗ್ಗೆ ಚರ್ಚಿಸಲು ಸಿಎಂ ಎರಡನೇ ತಾರೀಖು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತಗೆದುಕೊಂಡು ಸಿಎಂ  ಒಂದು‌ ನಿರ್ಧಾರಕ್ಕೆ ಬರ್ತಾರೆ. ಇದರ ಬಗ್ಗೆ ನಾನು ಈಗ್ಲೇ ಏನು ಹೇಳುವುದಿಲ್ಲ ಎಂದಿರುವ  ಶ್ರೀರಾಮುಲು, ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಹೇಳಿದರು.

click me!