ಮೆಟ್ರೋ ಪ್ರಯಾಣ ಶೇ.100ರಷ್ಟು ಸುರಕ್ಷಿತ

By Web DeskFirst Published Dec 15, 2018, 9:02 AM IST
Highlights

ನೂರಕ್ಕೆ ನೂರರಷ್ಟು ನಮ್ಮ ಮೆಟ್ರೋ ರೈಲು ಸಾರ್ವಜನಿಕರ ಪ್ರಯಾಣಕ್ಕೆ ಸುರಕ್ಷಿತವಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಭರವಸೆ ನೀಡಿದ್ದಾರೆ.

ಬೆಂಗಳೂರು :  ವದಂತಿಗಳಿಗೆ ಕಿವಿಗೊಡಬೇಡಿ. ನೂರಕ್ಕೆ ನೂರರಷ್ಟು ನಮ್ಮ ಮೆಟ್ರೋ ರೈಲು ಸಾರ್ವಜನಿಕರ ಪ್ರಯಾಣಕ್ಕೆ ಸುರಕ್ಷಿತವಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಭರವಸೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಕ 155 ನೇ ಕಂಬದಲ್ಲಿ ವಯಾಡಕ್ಟ್‌ನ ಬೀಮ್‌ನಲ್ಲಿ ಹನಿಕೊಂಬ್ (ಕಳಪೆ ಕಾಂಕ್ರಿಟ್‌ನಿಂದ ಆದ ಟೊಳ್ಳು)ಆಗಿ ಬಿರುಕು ಕಾಣಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣದಲ್ಲಿ ಮೆಟ್ರೋ ಕಂಬಗಳು (ಪಿಲ್ಲರ್) ಸುರಕ್ಷಿತವಾಗಿಲ್ಲ ಎಂಬ ವದಂತಿ ಹರಿದಾಡುತ್ತಿವೆ. ಆ ರೀತಿಯ ವದಂತಿಗಳಿಂದ ಸಾರ್ವಜನಿಕರು ಆತಂಕಪಡ
ಬೇಕಾಗಿಲ್ಲ. ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್ ಸಿಎಲ್ (ನಮ್ಮ ಮೆಟ್ರೋ) ಹೆಚ್ಚಿನ ಒತ್ತು ನೀಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದುರಸ್ತಿಗೆ ಈಗಾಗಲೇ ಪ್ರಾಥಮಿಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೆಟ್ರೋ ಆರಂಭ ದಿಂದ ಈವರೆಗೆ ಸಾರ್ವಜನಿಕರ ಸುರಕ್ಷತೆಗೆ ಸಾಕಷ್ಟು ಕ್ರಮ ಕೈಗೊಂಡು ಯೋಜನೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣ ಆರಂಭಕ್ಕೂ ಮುನ್ನ ಸುರಕ್ಷತೆಗೆ ಹಲವಾರು ತಪಾಸಣೆ ನಡೆಸಿ ಸಂಬಂಧಪಟ್ಟ ಇಲಾಖೆಯಿಂದ ಪ್ರಮಾಣ ಪತ್ರ ಪಡೆದು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಹಾಗೂ ನಿಗಧಿತ ಅವಧಿಯಲ್ಲಿ ನಿರಂತವಾಗಿ ತಪಾಸಣೆ ಮಾಡಲಾಗುತ್ತಿದೆ. ಹಾಗಾಗಿ, ಪ್ರಯಾಣಿಕರು ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಮೆಟ್ರೋ ರೈಲು ಪ್ರಯಾಣಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

 

ಬೈಯಪ್ಪನಹಳ್ಳಿ ಮಾರ್ಗದಲ್ಲಿ 2 ದಿನ ಮೆಟ್ರೋ ಸಂಚಾರ ಸ್ಥಗಿತ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಎದುರಾಗಿದೆ ಆತಂಕ!
click me!