ಮಾಧ್ಯಮಗಳಿಗೆ ಜಗನ್ ಸರ್ಕಾರ ಮೂಗುದಾರ!| ಸರ್ಕಾರದ ಇಮೇಜ್‌ಗೆ ಧಕ್ಕೆ ತರುವ ಸುದ್ದಿ ವಿರುದ್ಧ ಕೇಸು| ಇಲಾಖಾ ಕಾರ್ಯದರ್ಶಿಗಳಿಗೆ ಕೇಸು ದಾಖಲು ಅಧಿಕಾರ
ಅಮರಾವತಿ[ಅ.17]: ಕೆಲ ದಿನಗಳ ಹಿಂದಷ್ಟೇ ಸರ್ಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡಿದಕ್ಕೆ ಎರಡು ತೆಲುಗು ವಾಹಿನಿಗಳ ಪ್ರಸಾರ ಬಂದ್ ಮಾಡಿಸುವ ವಿರುದ್ಧ ಅಘೋಷಿತ ಸಮರ ಸಾರಿದ್ದ ಜಗನ್ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಈಗ ಮಾಧ್ಯಮ ಸ್ವಾತಂತ್ರಕ್ಕೆ ಮೂಗುದಾರ ಹಾಕಲು ಹೊರಟಿದೆ.
ರಾಜ್ಯದ ಅಭಿವೃದ್ಧಿಗೆ ಮಾರಕವಾಗುವ ಸುದ್ದಿ ಹರಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿ ರಾಜ್ಯ ಸಚಿವ ಸಂಪುಟ ಸಭೆ ಆದೇಶ ಹೊರಡಿಸಿದೆ.
ಬುಧವಾರ ಜಗನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ವ್ಯಕ್ತಿ, ಸಂಸ್ಥೆಗಳ ವಿರುದ್ಧ 24 ಗಂಟೆಯೊಳಗೆ ಕಾನೂನು ಕ್ರಮ ಕೈಗೊಳ್ಳಲು ಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಗಿದೆ. ಸುಳ್ಳು ಸುದ್ದಿಗಳು ಇಲಾಖೆ ಹಾಗೂ ಅಧಿಕಾರಿ ವಿರುದ್ಧ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ತೊಡಕಾಗುತ್ತಿದ್ದು, ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಸಚಿವ ಪೆರ್ನಿ ವೆಂಕಟರಾಮಯ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
2007ರಲ್ಲಿ ತಮ್ಮ ತಂದೆ ಜಗನ್ಮೋಹನ್ ರೆಡ್ಡಿ ಈ ನಿಯಮ ತಂದಿದ್ದರೂ, ಅದರಲ್ಲಿ ಸಾಮಾಜಿಕ ಜಾಲ ತಾಣವನ್ನು ಸೇರಿಸಿರಲಿಲ್ಲ.