ಕಾಳಿಂಗ ಸರ್ಪಕ್ಕೂ ಬಂತು ಆಧಾರ್ ರೀತಿ ವಿಶಿಷ್ಟ ನಂಬರ್!

By Kannadaprabha NewsFirst Published Oct 17, 2019, 7:58 AM IST
Highlights

ದೇಶದಲ್ಲಿ ಇದೇ ಮೊದಲು | ಕಾಳಿಂಗ ಸರ್ಪಕ್ಕೂ ಯೂನಿಕ್‌ ಐಡೆಂಟಿಟಿ ನಂಬರ್‌! ಆಗುಂಬೆಯ ರೈನ್‌ ಫಾರೆಸ್ಟ್‌ ರಿಸರ್ಚ್ ಸ್ಟೇಷನ್‌ ಕಾರ್ಯಾಚರಣೆ | ಈಗಾಗಲೇ 183 ಸರ್ಪಗಳಿಗೆ ಅಳವಡಿಕೆ

ಉಡುಪಿ (ಅ. 17): ದೇಶದ ನಾಗರಿಕರಿಗೆ ಆಧಾರ್‌ ನಂಬರ್‌ ನೀಡುವಂತೆ, ಇದೀಗ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ವಾಸಿಸುವ ಕಾಳಿಂಗ ಸರ್ಪಗಳಿಗೂ, ಯೂನಿಕ್‌ ಐಡೆಂಟಿಟಿ ನಂಬರ್‌ಗಳನ್ನು (ಅನನ್ಯ ಗುರುತಿನ ಸಂಖ್ಯೆ) ಅಳವಡಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಪಶ್ಚಿಮ ಘಟ್ಟವ್ಯಾಪ್ತಿಯಲ್ಲಿರುವ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಈ ಟ್ಯಾಗ್‌ ಅಳವಡಿಸಲು ಕೇಂದ್ರ ಸರ್ಕಾರದಿಂದ ಎಆರ್‌ಆರ್‌ಎಸ್‌ಗೆ ಪರವಾನಗಿ ಲಭಿಸಿದೆ.

ಈ ನಿಟ್ಟಿನಲ್ಲಿ ಸುರಳಿಹಳ್ಳದ ಆಗುಂಬೆ ರೈನ್‌ ಫಾರೆಸ್ಟ್‌ ರಿಸಚ್‌ರ್‍ ಸ್ಟೇಷನ್‌ (ಎಆರ್‌ಆರ್‌ಎಸ್‌) ಎನ್ನುವ ಸರ್ಕಾರೇತರ ಸಂಘಟನೆ ಈ ನಂಬರ್‌ಗಳನ್ನು ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಈಗಾಗಲೇ ಆಗುಂಬೆ ಪರಿಸರದಲ್ಲಿ 183 ಹಾವುಗಳಿಗೆ ಅಳವಡಿಕೆಯಾಗಿದೆ.

ಅಳವಡಿಕೆ ಹೇಗೆ?

ವಿಶ್ವದಲ್ಲಿಯೇ ಅತಿ ಹೆಚ್ಚು ಕಾಳಿಂಗ ಸರ್ಪ(ಕಿಂಗ್‌ ಕೋಬ್ರಾ)ಗಳ ಆವಾಸಸ್ಥಾನ, ತಂಪು ಮಳೆಕಾಡಿರುವ ತಾಣ ನಮ್ಮ ಪಶ್ಚಿಮ ಘಟ್ಟ. ಅದರಲ್ಲೂ ಆಗುಂಬೆ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತದೆ. ಇಲ್ಲಿ ಕಾಣಸಿಗುವ ಕಾಳಿಂಗ ಸರ್ಪಗಳ ದೇಹದೊಳಗೆ, 1 ಸೆಮೀ. ಉದ್ದದ ಅಕ್ಕಿಕಾಳಿನಂತಿರುವ ಪ್ಯಾಸಿವ್‌ ಇಂಟಗ್ರೇಟೆಡ್‌ ಟ್ರಾನ್ಸ್‌ಪಾಂಡರ್‌ (ಪಿಟ್‌) ಎಂಬ ಟ್ಯಾಗ್‌ ಅಳವಡಿಸಲಾಗುತ್ತದೆ. ಈ ಪ್ರತಿಯೊಂದು ಟ್ಯಾಗ್‌ ಪ್ರತ್ಯೇಕ ಅನನ್ಯ (ಯೂನಿಕ್‌) ನಂಬರ್‌ ಹೊಂದಿರುತ್ತದೆ.

ಮುಂದೆ ಅದು ಬದುಕಿರುವರೆಗೆ ಆ ಹಾವಿನ ಗುರುತಿನ ನಂಬರ್‌ ಆಗಿರುತ್ತದೆ. ಈ ಪಿಟ್‌ ಟ್ಯಾಗ್‌ನಿಂದ ಈ ಹಾವುಗಳ ಜೀವನಕ್ರಮದ ಬಗ್ಗೆ ನಿಖರವಾಗಿ ಅಧ್ಯಯನ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ಜೊತೆಗೆ ನಿಖರವಾಗಿಯಲ್ಲದಿದ್ದರೂ ದೀರ್ಘಕಾಲೀನ ಅಧ್ಯಯನದಿಂದ ಈ ಭಾಗದಲ್ಲಿರುವ ಕಾಳಿಂಗ ಸರ್ಪಗಳ ಸಂಖ್ಯೆಯನ್ನೂ ತಿಳಿಯುವುದಕ್ಕೆ ಸಾಧ್ಯ.

ಸುರಳಿಹಳ್ಳ ಎಂಬಲ್ಲಿ 2005ರಲ್ಲಿ ಸ್ಥಾಪನೆಯಾಗಿರುವ ಎಆರ್‌ಎಸ್‌ಎಸ್‌ನ ಕ್ಷೇತ್ರಕಾರ್ಯ ನಿರ್ದೇಶಕ ಅಜಯ್‌ ಗಿರಿ ಮತ್ತು ವ್ಯವಸ್ಥಾಪಕ ಜೈಕುಮಾರ್‌ ನೇತೃತ್ವದಲ್ಲಿ ಏಳು ಮಂದಿಯ ತಂಡ ಕಳೆದ 6 ತಿಂಗಳಿಂದ ಈ ಕಾರ್ಯಾಚರಣೆ ನಡೆಸುತ್ತಿದೆ.

ಟ್ಯಾಗ್‌ನಿಂದ ಹಾವಿಗೆ ಕಿರಿಕಿರಿ ಇಲ್ಲ

ಅಕ್ಕಿ ಕಾಳಿನಷ್ಟಿರುವ ಈ ಪಿಟ್‌ ಟ್ಯಾಗ್‌ ವಿದೇಶಗಳಲ್ಲಿ ಹಕ್ಕಿಗಳಿಗೆ, ಆಮೆಗಳಿಗೆ, ಮೀನುಗಳಿಗೆ, ಕಾಡು ಪ್ರಾಣಿಗಳಿಗೆ ಅಳವಡಿಸಿ ಅವುಗಳ ಬಗ್ಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗುತ್ತದೆ. ಆದರೆ ನಮ್ಮ ದೇಶಕ್ಕೆ ಇದು ಹೊಸತು. ಈ ಟ್ಯಾಗ್‌ನ್ನು ಸಿರಿಂಜಿನಂತಹ ಉಪಕರಣದಿಂದ ಹಾವಿನ ಬಾಲದಿಂದ ಸ್ವಲ್ಪ ಮೇಲಕ್ಕೆ ಚರ್ಮದಡಿಯಲ್ಲಿ ಇಂಜೆಕ್ಟ್ ಮಾಡಲಾಗುತ್ತದೆ ಮತ್ತು ಅದರ ನಂಬರ್‌, ಅಳವಡಿಸಿದ ದಿನಾಂಕ, ಹಾವನ್ನು ಹಿಡಿದ ಸ್ಥಳ, ಉದ್ದ, ಭಾರ, ಲಿಂಗ ಇತ್ಯಾದಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಈ ಟ್ಯಾಗ್‌ ಶಾಶ್ವತವಾಗಿ ಹಾವಿನ ದೇಹದೊಳಗಿರುತ್ತದೆ, ಇದರಿಂದ ಈ ಹಾವಿಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಎಆರ್‌ಆರ್‌ಎಸ್‌ ವ್ಯವಸ್ಥಾಪಕ ಜೈಕುಮಾರ್‌.

ಕಾಳಿಂಗಸರ್ಪದ ನಿಖರ ಮಾಹಿತಿ ಲಭ್ಯ

ಆಗುಂಬೆಯಲ್ಲಿ ಎಲ್ಲೇ ಕಾಳಿಂಗ ಸರ್ಪ ಕಾಣ ಸಿಕ್ಕಿದರೂ ಮೊದಲು ಎಆರ್‌ಆರ್‌ಎಸ್‌ಗೆ ಕರೆ ಹೋಗುತ್ತದೆ. ಅಲ್ಲಿಂದ ತಜ್ಞರು ಸ್ಥಳಕ್ಕೆ ಹೋಗಿ ಅದನ್ನು ಹಿಡಿದು ಪರಿಶೀಲಿಸುತ್ತಾರೆ, ಮೊಬೈಲ್‌ನಂತಿರುವ ಸ್ಕಾನರ್‌ನಿಂದ ಅದರ ಬಾಲದ ಮೇಲ್ಮೈ ಸ್ಕಾನ್‌ ಮಾಡುತ್ತಾರೆ. ಅದಕ್ಕೆ ಅದಾಗಲೇ ಪಿಟ್‌ ಟ್ಯಾಗ್‌ ಅಳವಡಿಸಿದ್ದರೆ ಅದರ ಯೂನಿಕ್‌ ನಂಬರನ್ನು ತೋರಿಸುತ್ತದೆ.

ಇದರಿಂದ ಆ ಹಾವನ್ನು ಹಿಂದೆ ಎಲ್ಲಿ ಹಿಡಿಯಲಾಗಿತ್ತು? ಅಲ್ಲಿಂದ ಈಗ ಪತ್ತೆಯಾದಲ್ಲಿಗೂ ಎಷ್ಟುದೂರ ಇದೆ? ಅಂದರೆ ಆ ಹಾವಿನ ಓಡಾಟದ ವ್ಯಾಪ್ತಿ ಎಷ್ಟು? ಅದು ಎಷ್ಟುದಿನಗಳಲ್ಲಿ ಎಷ್ಟುಉದ್ದ, ಭಾರ ಬೆಳೆದಿದೆ? ಅದರ ಆಹಾರ ಕ್ರಮ, ಜೀವನ ಕ್ರಮ, ಸಂತಾನೋತ್ಪತ್ತಿ, ಅವುಗಳ ವಯಸ್ಸು, ಆಯಸ್ಸು ಎಂಬಿತ್ಯಾದಿಗಳ ಬಗ್ಗೆ ವಿಸ್ತೃತ ಅಧ್ಯಯನ ಸಾಧ್ಯವಾಗಲಿದೆ.

- ಸಂದೀಪ್ ಕುಮಾರ್ ವಾಗ್ಳೆ 

click me!