
ಬೆಂಗಳೂರು(ಅ. 21): ವಿಧಾನಸೌಧದಲ್ಲಿ ಕೋಟಿಗಟ್ಟಲೆ ಕ್ಯಾಷ್ ಹಣ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿಧಾರವಾಡ ಮೂಲದ ವಕೀಲರೆನ್ನಲಾದ ಸಿದ್ಧಾರ್ಥ್ ಎಂಬುವವರು ಶುಕ್ರವಾರ ಮಧ್ಯಾಹ್ನ ವಿಧಾನಸೌಧ ಒಳಗಿಂದ 2.5 ಕೋಟಿ ರೂಪಾಯಿಯನ್ನು ಹೊರಗೆ ತೆಗೆದುಕೊಂಡು ಹೋಗುವಾಗ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.
ವಿಧಾನಸೌಧದ ಗೇಟ್ ಬಳಿ ಬಂದ ಸಿದ್ಧಾರ್ಥ್ ಅವರ ಕಾರಿನಲ್ಲಿ ಬ್ಯಾಗ್'ವೊಂದು ಕಂಡು ಬಂದಿದೆ. ಅದರಲ್ಲಿ ಏನಿದೆ ಎಂದು ಕೇಳಿದಾಗ ಸಿದ್ಧಾರ್ಥ್ ಉತ್ತರಿಸಲು ತಡಬಡಾಯಿಸಿದ್ದಾರೆ. ಆಗ ತಪಾಸಣೆ ನಡೆಸಿದಾಗ ಬ್ಯಾಗ್'ನಲ್ಲಿ 2.5 ಕೋಟಿ ನಗದು ಹಣ ಪತ್ತೆಯಾಗಿದೆ. ಕೂಡಲೇ ಸಿದ್ಧಾರ್ಥ್ ಮತ್ತು ಆ ಹಣವನ್ನು ವಶಕ್ಕೆ ಪಡೆಯಲಾಗಿದೆ.
ವಿಧಾನಸೌಧದಲ್ಲಿ ಕ್ಯಾಷ್ ವಹಿವಾಟು ಮಾಡುವಂತಿಲ್ಲ..
ವಿಧಾನಸೌಧದಲ್ಲಿ ಹಣದ ವ್ಯವಹಾರ ಯಾವತ್ತೂ ಕ್ಯಾಷ್'ನಲ್ಲಿ ಇರುವುದಿಲ್ಲ. ಇಲ್ಲೇನಿದ್ದರೂ ಚೆಕ್ ಮೂಲಕ ಹಣದ ವಹಿವಾಟು ನಡೆಯುವುದು. ಅಷ್ಟೇ ಅಲ್ಲ, ವಿಧಾನಸೌಧದ ಬಹುತೇಕ ಕಾರ್ಯಚಟುವಟಿಕೆ ಆಡಳಿತಾತ್ಮಕವಾಗಿ ಇರುತ್ತದೆ. ಇಲ್ಲಿ ಹಣದ ವಹಿವಾಟಿನ ಪ್ರಮೇಯವೇ ಇರುವುದಿಲ್ಲ. ಹೀಗಿದ್ದರೂ ಇಲ್ಲಿ ಕ್ಯಾಷ್ ಹಣ ಸಾಗಿಹೋಗುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಉ.ಕ. ಮೂಲದ ಸಚಿವರ ಹಣವೇ?
ಸುವರ್ಣನ್ಯೂಸ್'ಗೆ ಸಿಕ್ಕ ಮಾಹಿತಿ ಪ್ರಕಾರ ಈ ಹಣವು ಉತ್ತರ ಕರ್ನಾಟಕ ಮೂಲದ ಸಚಿವರಿಗೆ ಸೇರಿದ್ದೆನ್ನಲಾಗಿದೆ. ಧಾರವಾಡ ಈ ವಕೀಲರಿಗೆ ಹಣ ಕೊಡುವ ಮೂಲಕ ತಮ್ಮ ಕೆಲಸ ಮಾಡಿಕೊಳ್ಳಲು ಅವರು ಯತ್ನಿಸಿದ್ದರೆಂಬ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿದೆ.
ಕಾರಿನ ಜಾಡು ಹಿಡಿದಾಗ...
ಕ್ಯಾಷ್ ಸಮೇತ ಸಿಕ್ಕಿಬಿದ್ದ ಕಾರು ವೋಲ್ಸ್'ವ್ಯಾಗನ್ ಕಂಪನಿಯದ್ದು. ಇದರ ರಿಜಿಸ್ಟ್ರೇಷನ್ ನಂಬರ್ ಕೆಎ 04 ಎಂಎಂ 9018. 2013ರಂದು ಯಶವಂತಪುರದ ಆರ್'ಟಿಓ ಕಚೇರಿಯಲ್ಲಿ ಸಿದ್ಧಾರ್ಥ್ ಹೆಚ್.ಎಂ. ಎಂಬುವವರಿಗೆ ನೊಂದಣಿಯಾದ ಕಾರಿದು. ಅದರ ವಿಳಾಸ: ನಂ. 144, 10ನೇ ಮುಖ್ಯರಸ್ತೆ, ಜುಡಿಷಿಯಲ್ ಲೇಔಟ್, ಜಕ್ಕೂರ್ ಕ್ರಾಸ್, ಬೆಂಗಳೂರು.
ಸಿದ್ದಾರ್ಥ್'ರನ್ನು ಬಿಟ್ಟುಬಿಡಲು ಒತ್ತಡ?
ವಿಧಾನಸೌಧದ ಗೇಟ್ ಬಳಿ ಕ್ಯಾಷ್ ಸಮೇತ ಸಿಕ್ಕಿಬಿದ್ದ ಸಿದ್ಧಾರ್ಥ್ ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕರಣವನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಸಿದ್ಧಾರ್ಥ್'ರನ್ನು ಬಿಟ್ಟುಬಿಡಿ ಎಂಬಂತಹ ಒತ್ತಡದ ಕರೆಗಳು ಪೊಲೀಸರಿಗೆ ಬರುತ್ತಿವೆ ಎಂಬ ಮಾಹಿತಿ ಬೇರೆ ಮೂಲಗಳಿಂದ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.
ವಿಧಾನಸೌಧದ ಭದ್ರತಾ ಡಿಸಿಪಿ ಯೋಗೇಶ್ ಅವರಿಂದ ಸದ್ಯ ವಿಚಾರಣೆ ನಡೆಯುತ್ತಿದೆ. ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಅವರೂ ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.