ಇಂದು ಮಾತೆ ಕ್ರಿಯಾ ಸಮಾ​ಧಿ

By Web DeskFirst Published Mar 16, 2019, 11:31 AM IST
Highlights

24 ವರ್ಷ ಹಿಂದಿನ ಇಷ್ಟಲಿಂಗ ಆಕೃತಿಯ ಗೂಡಿನಲ್ಲಿ ಮಹಾದೇವಿ ಕ್ರಿಯಾವಿಧಿ| 12 ಸಾವಿರ ವಿಭೂತಿ ಜೋಡಿಸಿ ಸಮಾಧಿ ಕಾರ್ಯಕ್ಕೆ ಕೂಡಲಸಂಗಮದಲ್ಲಿ ಸಿದ್ಧತೆ| ಬೆಂಗಳೂರಿಂದ ನಿನ್ನೆ ಸಂಜೆ ಕೂಡಲಸಂಗಮಕ್ಕೆ ಕಳೇಬರ ಭಕ್ತರಿಗೆ ಪ್ರಸಾದ ವ್ಯವಸ್ಥೆ

 

ಹುನಗುಂದ[ಮಾ.16]: ಗುರುವಾರ ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಮಹಾದೇವಿ ಅವರ ಕ್ರಿಯಾ ಸಮಾಧಿಗೆ ಕೂಡಲಸಂಗಮದ ಬಸವ ಧರ್ಮ ಪೀಠ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಶನಿವಾರ ಕ್ರಿಯಾ ಸಮಾಧಿ ಕಾರ್ಯ ನಡೆಯಲಿದೆ.

ಮಾತೆ ಮಹಾದೇವಿ ಉತ್ತರಾಧಿಕಾರಿ ಯಾರು..?

ಕೂಡಲಸಂಗಮದ ಬಸವ ಧರ್ಮಪೀಠದ ಆವರಣದ ಶರಣ ಲೋಕದ ಘಣಲಿಂಗ ಮಂಟಪದಲ್ಲಿರುವ ಅಕ್ಕಮಹಾದೇವಿ ಹಾಗೂ ಅಂತರ್ಜಾತಿ ವಿವಾಹದ ಚಿತ್ರಪಟದ ಬಳಿ 24 ವರ್ಷಗಳ ಹಿಂದೆ ಸಮಾಧಿ ನಿರ್ಮಾಣಗೊಂಡಿದೆ. ಸಮಾಧಿ ಒಳಗೆ ಸಿಮೆಂಟ್‌ ಮತ್ತು ಕಾಂಕ್ರಿಟ್‌ನಿಂದ ತಯಾರಿಸಿದ 6 ಅಡಿ ಎತ್ತರ, 5 ಅಡಿ ಅಗಲದ ಇಷ್ಟಲಿಂಗ ಆಕೃತಿಯ ಗೂಡಿನಲ್ಲಿ ಮಾತೆ ಮಹಾದೇವಿಯವರ ಪಾರ್ಥಿವ ಶರೀರವನ್ನಿಟ್ಟು, 12 ಸಾವಿರ ವಿಭೂತಿ ಜೋಡಿಸಿ, ಲಿಂಗಾಯತ ಧರ್ಮ ಹಾಗೂ ಬಸವ ತತ್ವದ ವಿಧಿ ವಿಧಾನದ ಮೂಲಕ ಅವರ ಕ್ರಿಯಾ ಸಮಾಧಿ ನಡೆಸಲು ಬಸವಧರ್ಮ ಪೀಠದ ಭಕ್ತರು ಮತ್ತು ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿನಿಂದ ಕೂಡಲಸಂಗಮಕ್ಕೆ ಆಗಮಿಸಿದ ಮಾತೆ ಮಹಾದೇವಿಯವರ ಪಾರ್ಥಿವ ಶರೀರವನ್ನು ಚಾಲುಕ್ಯ ಮಹಾದ್ವಾರದಿಂದ ಬಸವಣ್ಣನವರ ಐಕ್ಯ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು. ಮರಳಿ ಬಸವಧರ್ಮ ಪೀಠದ ಮಹಾಮನೆ ಆವರಣಕ್ಕೆ ತಂದು ಬಸವತತ್ವದಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶನಿವಾರ ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಬೃಹತ್‌ ವೇದಿಕೆ ಸಿದ್ಧ:

ಕರ್ನಾಟಕವಲ್ಲದೇ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆ ಬಸವ ಭಕ್ತರು ಮಾತಾಜಿಯವರ ಅಂತಿಮ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಅವರ ಪಾರ್ಥಿವ ಶರೀರ ಇಡಲು ವೇದಿಕೆ ಮತ್ತು ಅಂತಿಮ ದರ್ಶನಕ್ಕೆ ಬರುವ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಕುಳಿತುಕೊಳ್ಳಲು ಬೃಹತ್‌ ಆಕಾರದ ಪೆಂಡಾಲ್‌ ಹಾಕಲಾಗಿದೆ. ಅಂತಿಮ ದರ್ಶನಕ್ಕೆ ವಿಐಪಿಗಳಿಗೆ ಮತ್ತು ಮಠಾಧೀಶರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಪ್ರಸಾದ ವ್ಯವಸ್ಥೆ:

ಮಾತೆ ಮಹಾದೇವಿಯವರ ಇಚ್ಛೆಯಂತೆ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಶುಕ್ರವಾರದಿಂದಲೇ ಆರಂಭಿಸಲಾಗಿದೆ. ಇದಕ್ಕಾಗಿ 100ಕ್ಕೂ ಹೆಚ್ಚು ಬಾಣಸಿಗರು ಮತ್ತು ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಚಿತ್ತರಗಿಯ ಗುರುಮಹಾಂತ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ಇತರ ಪ್ರಮುಖ ಮಠಾಧೀಶರು ಸಮಾಧಿ ಕ್ರಿಯೆಯ ಎಲ್ಲ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

click me!