ಹೊಸ ನಿಯಮ : 1400 ಕಾರ್ಖಾನೆಗಳಿಗಿಲ್ಲ ವಿದ್ಯುತ್‌!

By Web DeskFirst Published Mar 16, 2019, 9:38 AM IST
Highlights

ಬೆಂಗಳೂರಿನಲ್ಲಿ  ಕೋಟ್ಯಂತರ ರುಪಾಯಿ ವಿದ್ಯುತ್‌ ಶುಲ್ಕ ಪಾವತಿಸಿದ್ದರೂ 1,400 ಬೃಹತ್‌ ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳು ವಿದ್ಯುತ್‌ ಸಂಪರ್ಕವಿಲ್ಲದೆ ಬಾಗಿಲು ಮುಚ್ಚುವಂತಾಗಿದೆ.

ಬೆಂಗಳೂರು :  ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ವು ಮುನ್ಸೂಚನೆ ಇಲ್ಲದೆ ಹಠಾತ್‌ ಜಾರಿಗೆ ತಂದಿರುವ ನಿಯಮದಿಂದಾಗಿ ಕೋಟ್ಯಂತರ ರುಪಾಯಿ ವಿದ್ಯುತ್‌ ಶುಲ್ಕ ಪಾವತಿಸಿದ್ದರೂ 1,400 ಬೃಹತ್‌ ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳು ವಿದ್ಯುತ್‌ ಸಂಪರ್ಕವಿಲ್ಲದೆ ಬಾಗಿಲು ಮುಚ್ಚುವಂತಾಗಿದೆ.

2018ರ ಡಿಸೆಂಬರ್‌ 26ಕ್ಕೆ ಮೊದಲೇ 1,400 ಸಂಸ್ಥೆಗಳು ಬೆಸ್ಕಾಂನ ‘ಎಚ್‌ಟಿ-ಲೇನ್‌’ (ಹೈಟೆನ್ಷನ್‌ ಲೇನ್‌) ವಿದ್ಯುತ್‌ ಸೇವೆ ಪಡೆಯಲು ಶುಲ್ಕ ಪಾವತಿಸಿವೆ. ಇವುಗಳಲ್ಲಿ 541 ಕಡೆ ಎಚ್‌ಟಿ ಇನ್‌ಸ್ಟಾಲೇಷನ್‌ ಕಾಮಗಾರಿಯೂ ಪೂರ್ಣಗೊಂಡಿದೆ.

ಹೀಗಿರುವಾಗ ಹಠಾತ್ತನೆ 2018ರ ಡಿಸೆಂಬರ್‌ 26ರಿಂದ ಅನ್ವಯವಾಗುವಂತೆ ಎಚ್‌ಟಿ ವಿದ್ಯುತ್‌ ಸಂಪರ್ಕಕ್ಕೂ ಸ್ವಾಧೀನಾನುಭವ ಪತ್ರ ಕಡ್ಡಾಯ ಎಂಬ ಹೊಸ ನಿಯಮವನ್ನು ಕೆಇಆರ್‌ಸಿ ಹೊರಡಿಸಿದೆ. ನಿಯಮ ಜಾರಿಗೆ ಯಾವುದೇ ಗಡುವು ನೀಡದಿರುವುದರಿಂದ ಈಗಾಗಲೇ ಸಂಪರ್ಕಕ್ಕಾಗಿ ಶುಲ್ಕ ಪಾವತಿಸಿರುವವರಿಗೆ ಶುಲ್ಕವೂ ವಾಪಸು ನೀಡದೆ, ವಿದ್ಯುತ್‌ ಸಂಪರ್ಕವನ್ನೂ ನೀಡದೆ ಬೆಸ್ಕಾಂ ಸತಾಯಿಸಿದೆ.

ಈ ಬಗ್ಗೆ ಬೆಸ್ಕಾಂ ವಿರುದ್ಧ ಗ್ರಾಹಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ, ವಿದ್ಯುತ್‌ ಶುಲ್ಕ ಪಾವತಿಸಿ ವಿದ್ಯುತ್‌ ಸಂಪರ್ಕ ಪಡೆಯುವ ಕಾಮಗಾರಿ ಪ್ರಗತಿಯಲ್ಲಿರುವ 1,400 ಎಚ್‌ಟಿ ಸಂಪರ್ಕಗಳಿಗೆ ಯಾವ ಕ್ರಮ ಅನುಸರಿಸಬೇಕು, ಈ ಪ್ರಕರಣಗಳಿಗೆ ಅಂತಿಮ ಗಡುವು ವಿಸ್ತರಿಸಲು ಅವಕಾಶವಿದೆಯೇ ಎಂದು ಸ್ಪಷ್ಟೀಕರಣ ಬಯಸಿ ಪತ್ರ ಬರೆದಿರುವುದಾಗಿ ಬೆಸ್ಕಾಂ ಆಪರೇಷನ್ಸ್‌ ವಿಭಾಗದ ಹಿರಿಯ ಅಧಿಕಾರಿ  ತಿಳಿಸಿದ್ದಾರೆ.

ಉದ್ಯಮಿಗಳ ಅಳಲು:  ಬೆಸ್ಕಾಂ ವ್ಯಾಪ್ತಿ ಸೇರಿದಂತೆ ಬಹುತೇಕ ಕಡೆ ಫ್ಯಾಕ್ಟರಿ ಶೆಡ್‌ಗೆ ಬಿಬಿಎಂಪಿ ಸೇರಿದಂತೆ ಯಾವುದೇ ಸಂಸ್ಥೆಯಿಂದ ಸ್ವಾಧೀನಾನುಭವ ಪತ್ರ ಪಡೆಯುವ ವಾಡಿಕೆ ಇಲ್ಲ. ಒಂದು ವೇಳೆ ಸುರಕ್ಷತೆ ದೃಷ್ಟಿಯಿಂದ ಈ ನಿಯಮ ಜಾರಿಗೆ ತಂದರೂ ಈಗಾಗಲೇ ಅರ್ಜಿ ಸಲ್ಲಿಸಿ ವಿದ್ಯುತ್‌ ಸಂಪರ್ಕ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವ ಸಂಪರ್ಕಗಳಿಗೆ ಹೊರತುಪಡಿಸಿ ಜಾರಿಗೆ ತರಬೇಕು. ಅದನ್ನು ಬಿಟ್ಟು ಈಗಾಗಲೇ ಶುಲ್ಕ ಪಾವತಿಸಿ ಇನ್‌ಸ್ಟಾಲೇಷನ್‌ ಕಾಮಗಾರಿ ಪೂರ್ತಿಯಾಗಿ ವಿದ್ಯುತ್‌ ಸಂಪರ್ಕ ನೀಡುವಾಗ ಬೆಸ್ಕಾಂ ವಿದ್ಯುತ್‌ ಕೊಡಲ್ಲ ಎನ್ನುತ್ತಿದೆ. ಇದರಿಂದ ಕೋಟ್ಯಂತರ ರು. ಬಂಡವಾಳ ಹಾಕಿ ಉದ್ಯಮ ಸ್ಥಾಪಿಸುತ್ತಿರುವ ನಮಗೆ ತೀವ್ರ ಆಘಾತ ಉಂಟಾಗಿದೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ. ನೂತನ ನಿಯಮದಿಂದ ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ ಭಾಗದ ಎಲ್ಲಾ ನಗರ ಸಭೆ ವ್ಯಾಪ್ತಿಯ 1,400 ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಪೆಟ್ಟು ಬಿದ್ದಿದೆ.

ಹೊಸ ನಿಯಮ: ಕೆಇಆರ್‌ಸಿಯು 6ನೇ ಹಾಗೂ 7ನೇ ತಿದ್ದುಪಡಿ ಮೂಲಕ ‘ಸ್ವಾಧೀನಾನುಭವ ಪತ್ರ’ ಪಡೆಯದೆ ವಿದ್ಯುತ್‌ ಸಂಪರ್ಕ ನೀಡಬಾರದು ಎಂದು ಬೆಸ್ಕಾಂಗೆ ಆದೇಶಿಸಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೊನೆ ಹಂತದಲ್ಲಿ ‘ಒಸಿ’ ಬೇಕು ಎಂದು ಹೇಳುತ್ತಾರೆ. ಈಗಾಗಲೇ ಅರ್ಜಿ ನೋಂದಣಿ, ಸ್ಥಳ ಪರಿಶೀಲನೆ, ಶುಲ್ಕ ಪಾವತಿ ಮಾಡಿಸಿಕೊಂಡು ಕಾರ್ಯಾದೇಶವನ್ನೂ ನೀಡಿರುವ ಪ್ರಕರಣಗಳಲ್ಲಿ ಈ ನಿಯಮ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸ್ಪಷ್ಟನೆ ಕೇಳಿ ಕೆಇಆರ್‌ಸಿಗೆ ಬೆಸ್ಕಾಂ ಪತ್ರ

ವಿವಾದದ ಬೆನ್ನಲ್ಲೇ ಮಾ.11ರಂದು ಸ್ಪಷ್ಟನೆ ಕೇಳಿ ಕೆಇಆರ್‌ಸಿ ಕಾರ್ಯದರ್ಶಿಗೆ ಬೆಸ್ಕಾಂ ಪತ್ರ ಬರೆದಿದೆ. ಎಚ್‌ಟಿ ಹಾಗೂ ಇಎಚ್‌ಟಿ ವಿದ್ಯುತ್‌ ಪೂರೈಕೆ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಲಾಗಿದೆ. ಆದರೆ, ಈ ವೇಳೆಗೆ 1,400 ಎಚ್‌.ಟಿ. ಅರ್ಜಿಗಳು ನೋಂದಾಯಿಸಿ ಕೊಂಡಿದ್ದೇವೆ. ಇದರಲ್ಲಿ 541 ಪ್ರಕರಣದಲ್ಲಿ ಈಗಾಗಲೇ ಎಚ್‌.ಟಿ. ಇನ್‌ಸ್ಟಾಲೆಷನ್‌ ಕಾಮಗಾರಿ ಮುಗಿಸಿದ್ದು ಸರ್ವಿಸ್‌ ಪಡೆಯುವುದು ಮಾತ್ರ ಬಾಕಿ ಇದೆ. 689 ಪ್ರಕರಣಗಳಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಈಗಾಗಲೇ ಅಗತ್ಯ ಶುಲ್ಕ ಪಾವತಿ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 206 ಪ್ರಕರಣಗಳಲ್ಲಿ ವಿದ್ಯುತ್‌ ಸಂಪರ್ಕವನ್ನು ಈಗಾಗಲೇ ನೀಡಿದ್ದು, ಬೆಸ್ಕಾಂಗೆ ಶುಲ್ಕ ಪಾವತಿ ಮಾಡುವುದು ಸೇರಿದಂತೆ ಕೆಲ ಪ್ರಕ್ರಿಯೆ ಬಾಕಿ ಇದೆ. ಹೀಗಾಗಿ ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಕ್ತ ಸ್ಪಷ್ಟನೆ ನೀಡಿ ಎಂದು ಮನವಿ ಮಾಡಿದ್ದಾರೆ.

ಕೆಇಆರ್‌ಸಿ ನೂತನ ನಿಯಮದ ಪ್ರಕಾರ ಎಚ್‌ಟಿ ಸಂಪರ್ಕ ಪಡೆಯುವವರಿಗೂ ಸ್ವಾಧೀನಾನುಭವ ಪತ್ರ ಕಡ್ಡಾಯ. ಕಳೆದ ವರ್ಷದ ಡಿ.26ರಿಂದಲೇ ನಿಯಮ ಜಾರಿಯಾಗಿರುವುದರಿಂದ ಈ ಮೊದಲೇ ಸಂಪರ್ಕಕ್ಕೆ ಶುಲ್ಕ ಕಟ್ಟಿರುವ ಹಾಗೂ ಕಾಮಗಾರಿ ಪೂರ್ಣಗೊಂಡಿರುವವರೂ ಸ್ವಾಧೀನಾನುಭವ ಪತ್ರ ನೀಡಬೇಕು. ಇಲ್ಲದಿದ್ದರೆ ವಿದ್ಯುತ್‌ ನೀಡಲಾಗದು.

-ನಾಗರಾಜ್‌, ಮುಖ್ಯ ಎಂಜಿನಿಯರ್‌, ಬೆಸ್ಕಾಂ.

ವರದಿ : ಶ್ರೀಕಾಂತ ಎನ್‌.ಗೌಡಸಂದ್ರ

click me!