ಐಎನ್‌ಎಕ್ಸ್‌ ಮೀಡಿಯಾ ಹಗರಣ: ಚಿದಂಬರಂ ವಿರುದ್ಧ ಇಡಿ ಲುಕ್ ಔಟ್ ನೊಟೀಸ್ ಜಾರಿ!

By Web DeskFirst Published Aug 21, 2019, 1:37 PM IST
Highlights

ಐಎನ್‌ಎಕ್ಸ್‌ ಮೀಡಿಯಾ ಹಗರಣ| ಬಂಧನ ಭೀತಿಯಲ್ಲಿ ಪಿ. ಚಿದಂಬರಂ| ಕೋರ್ಟ್‌ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಚಿದಂಬರಂ ನಾಪತ್ತೆ, ಮೊಬೈಲ್ ಸ್ವಿಚ್‌ ಆಫ್| ಚಿದಂಬರಂ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

ನವದೆಹಲಿ[ಆ.21]: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಸಂಬಂಧ ಬಂಧನದ ಬೀತಿ ಎದುರಿಸುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಒಂದೆಡೆ ರಕ್ಷಣೆಗಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಈ ನಡುವೆ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ. 

ಪಿ.ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ನಿನ್ನೆ ಮಂಗಳವಾರ ಸಿಬಿಐ ಅಧಿಕಾರಿಗಳ ತಂಡವೊಂದು ದೆಹಲಿಯ ಜೊರ್ ಬಾಗ್ ನಲ್ಲಿರುವ ಚಿದಂಬರಂ ಮನೆಗೆ ಆಗಮಿಸಿತ್ತು. ಆದರೆ ಆಗ ಚಿದರಂಬರಂ ಅಲ್ಲಿರಲಿಲ್ಲ. ಹೀಗಾಗಿ ಮುಂದಿನ ಎರಡು ಗಂಟೆಗಳೊಳಗೆ ಸಿಬಿಐ ಮುಂದೆ ಹಾಜರಾಗುವಂತೆ ಅಧಿಕಾರಿಗಳು ಚಿದಂಬರಂ ನಿವಾಸದ ಹೊರಗೆ ನೊಟೀಸ್ ಲಗತ್ತಿಸಿ ತೆರಳಿದ್ದರು. ಹೀಗಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಇದಾದ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಒಂದು ತಂಡ ಚಿದಂಬರಂ ನಿವಾಸಕ್ಕೆ ತೆರಳಿತ್ತು. ಆ ಸಂದರ್ಭದಲ್ಲೂ ಚಿದಂಬರಂ ಪತ್ತೆಯಾಗಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದ್ದರೂ ಸ್ವಿಚ್‌ ಆಫ್ ಆಗಿತ್ತು. ಹೀಗಾಗಿ ಚಿದಂಬರಂ ದೇಶ ಬಿಟ್ಟು ಹೋಗುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ.  

ಚಿದಂಬರಂ ದಿಢೀರ್ ಪರಾರಿ: ದೇಶ ಎದ್ದು ಕುಳಿತಿತು ಹೌಹಾರಿ!

ಸದ್ಯ ಚಿದಂಬರಂ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲದಿದ್ದರೂ INX ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆ ಮಾಡುವ ಅವಶ್ಯಕತೆ ಇದೆ. ಹೀಗಿರುವಾಗ ಬಂಧನವಾಗುವ ಭೀತಿಯಲ್ಲಿ ಚಿದಂಬರಂ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವುದರಿಂದ ದೇಶದ ಎಲ್ಲಾ ಪ್ರಮುಖ ವಾಯು, ಬಂದರು ಮತ್ತು ಭೂ ನಿಲ್ದಾಣಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಜಾಮೀನು ಪಡೆಯಲು ಸರ್ಕಸ್

ಬಂಧನದ ಭೀತಿ ತಪ್ಪಿಸಿಕೊಳ್ಳಲು ಚಿದು ಪರ ವಕೀಲರು ಮಂಗಳವಾರವೇ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಅಲ್ಲಿಂದ ಜಾಮೀನು ಪಡೆಯುವ ಯತ್ನ ನಡೆಸಿದರಾದರೂ, ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಬುಧವಾರಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿದೆ. ಹೀಗಾಗಿ ಚಿದು ಭೀತಿ ಮತ್ತಷ್ಟು ಹೆಚ್ಚಿದೆ.

ಏರಿಂಡಿಯಾ ಕೇಸಲ್ಲಿ ಚಿದುಗೆ ಸಂಕಷ್ಟ?: ಆ. 23ಕ್ಕೆ ಹಾಜರಾಗಲು ನೋಟಿಸ್

ಜಾಮೀನಿಲ್ಲ:

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ ಹಲವು ಬಾರಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಚಿದಂಬರಂಗೆ ಮಂಗಳವಾರ ನಿರಾಸೆ ಕಾಡಿತ್ತು. ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಸಾಕ್ಷ್ಯಗಳು ಮೇಲ್ನೋಟಕ್ಕೆ ಚಿದು ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿವೆ. ಹೀಗಾಗಿ ಇಂಥ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿಕೆ ಸೂಕ್ತವಲ್ಲ ಎಂದ ನ್ಯಾ. ಸುನಿಲ್‌ ಗೌರ್‌, ಅರ್ಜಿ ತಿರಸ್ಕರಿಸಿದರು. ಅಲ್ಲದೆ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ನಿಟ್ಟಿನಲ್ಲಿ ಆದೇಶ ಜಾರಿಗೆ 3 ದಿನ ತಡೆ ನೀಡುವಂತೆ ಚಿದು ಪರ ವಕೀಲರು ಮಾಡಿದ ಮನವಿಯನ್ನೂ ನ್ಯಾ.ಗೌರ್‌ ತಿರಸ್ಕರಿಸಿದರು.

ಪ್ರಕರಣ ಹಿನ್ನೆಲೆ?

2007ರ ಯುಪಿಎ ಸರ್ಕಾರದಲ್ಲಿ ಅವಧಿಯಲ್ಲಿ ಐಎನ್‌ಎಕ್ಸ್‌ ಮೀಡಿಯಾ ಎಂಬ ಕಂಪನಿ ವಿದೇಶದಿಂದ 305 ಕೋಟಿ ರು. ಬಂಡವಾಳ ಸ್ವೀಕರಿಸಲು ಹಣಕಾಸು ಸಚಿವ ಚಿದಂಬರಂ ಮುಖ್ಯಸ್ಥರಾಗಿದ್ದ ‘ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿ’ಯಿಂದ ಅನುಮತಿ ಕೋರಿತ್ತು. ಈ ಕೋರಿಕೆಯನ್ನು ಸರ್ಕಾರ ಮಾನ್ಯ ಮಾಡಿತ್ತು. ಆದರೆ ಹೀಗೆ ಅನುಮತಿ ಪಡೆಯುವುದಕ್ಕೆ ಸಂಸ್ಥೆಯು, ಚಿದು ಅವರ ಪುತ್ರ ಕಾರ್ತಿಗೆ ಲಂಚ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ತಿ, ತಮ್ಮ ತಂದೆ ಸಚಿವರಾಗಿರುವ ಇಲಾಖೆ ಮೂಲಕ ಅನುಮತಿ ದೊರಕಿಸಿಕೊಟ್ಟಿದ್ದರು ಎಂಬ ದೂರು ಕೇಳಿಬಂದಿತ್ತು. ಈ ಬಗ್ಗೆ 2008ರಲ್ಲಿ ಸಿಬಿಐ ಮತ್ತು ಇಡಿ ಕೇಸು ದಾಖಲಿಸಿಕೊಂಡಿತ್ತು.

ಬೂಂ ಬೂಂ: ಮೋದಿ ಬೆಂಬಲಕ್ಕೆ ದೌಡಾಯಿಸಿದ ಚಿದಂಬರಂ!

ಹಗರಣದಲ್ಲಿ ಚಿದು ಕಿಂಗ್‌ಪಿನ್‌

ಚಿದಂಬರಂಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸುವ ವೇಳೆ ಕೋರ್ಟ್‌ ಹಲವು ಮಹತ್ವದ ಅಂಶಗಳನ್ನು ಪ್ರತಿಪಾದಿಸಿದೆ. ಅಲ್ಲದೆ ತಿರಸ್ಕರಿಸಲು ಏನೇನು ಕಾರಣ ಎಂಬುದನ್ನೂ ವಿವರಿಸಿದೆ. ಅವುಗಳೆಂದರೆ...

- ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿದ್ದ ವೇಳೆ ತನಿಖಾ ಸಂಸ್ಥೆಗಳ ಪ್ರಶ್ನೆಗಳಿಗೆ ಚಿದು ಸೂಕ್ತ ಉತ್ತರ ನೀಡಿಲ್ಲ. ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ.

- ಪ್ರಕರಣದ ಸಾಕ್ಷ್ಯಗಳು, ಆರೋಪಿಯು ಮೇಲ್ನೋಟಕ್ಕೆ ಇಡೀ ಕೇಸಿನ ಕಿಂಗ್‌ಪಿನ್‌ ರೀತಿಯಲ್ಲಿ ಗೋಚರಿಸುವಂತೆ ಮಾಡಿದೆ.

- ಅಕ್ರಮ ಹಣ ವರ್ಗಾವಣೆಗೆ ಈ ಪ್ರಕರಣ ಅತ್ಯುತ್ತಮ ಉದಾಹರಣೆ. ಇಂಥ ಕೇಸಲಿ ಜಾಮೀನು ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ.

- ಅರ್ಜಿದಾರರು ಸಂಸದರು ಎಂಬ ಏಕೈಕ ಕಾರಣಕ್ಕೆ ಜಾಮೀನು ನೀಡಲಾಗದು. ರಾಜಕೀಯ ಕಾರಣಕ್ಕಾಗಿ ಕೇಸು ದಾಖಲು ಎಂಬ ಆರೋಪವೂ ಕ್ಲೀಷೆಯಂತಿದೆ.

- ಇಂಥ ಗಂಭೀರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಕೈ ಕಟ್ಟಿಹಾಕಲಾಗದು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅವಶ್ಯಕತೆ ಕಂಡುಬರುತ್ತಿದೆ.

click me!