ಮಾಜಿ ಡಿಸಿಎಂ ಅಶೋಕ್ ಗೆ ಎದುರಾಯ್ತು ಸಂಕಷ್ಟ

By Web DeskFirst Published Sep 26, 2018, 11:05 AM IST
Highlights

ಬಿಜೆಪಿ ಮುಖಂಡ ಆರ್. ಅಶೋಕ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧದ ಪ್ರಕರಣದ ತನಿಖೆಗೆ ಇದೀಗ ಹೈ ಕೋರ್ಟ್ ಹಸಿರು ನಿಶಾನೆ ತೋರಿದೆ

ಬೆಂಗಳೂರು :  ಬಿಜೆಪಿ ಶಾಸಕ ಆರ್‌.ಅಶೋಕ ವಿರುದ್ಧದ ಬಗರ್‌ ಹುಕುಂ ಜಮೀನು ಅಕ್ರಮ ಮಂಜೂರಾತಿ ಆರೋಪ ಕುರಿತ ಪ್ರಕರಣದ ತನಿಖೆ ಮುಂದುವರಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಹೈಕೋರ್ಟ್‌ ಮಂಗಳವಾರ ಹಸಿರು ನಿಶಾನೆ ತೋರಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಆರ್‌. ಅಶೋಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ಏಕಸದಸ್ಯ ಪೀಠ, ಎಸಿಬಿಯು ಪ್ರಕರಣದ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಎಸಿಬಿ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ. ನಂತರ ಅರ್ಜಿದಾರರು ತಮ್ಮ ಆಕ್ಷೇಪಣೆಗಳನ್ನು ಮಂಡಿಸಲು ಅವಕಾಶ ಇದ್ದೆ ಇರುತ್ತದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು. ಇದೇ ವೇಳೆ ಎಫ್‌ಐಆರ್‌ಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ, ತನಿಖೆ ಮುಂದುವರಿಸುವಂತೆ ಎಸಿಬಿಗೆ ಸೂಚಿಸಿತು.

ಪ್ರಕರಣವೇನು?:  ಆರ್‌.ಅಶೋಕ್‌ 1998 ರಿಂದ 2006ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್‌ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಪೊಲೀಸರು ಅಶೋಕ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಈ ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅಶೋಕ, ತಾವು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿದ್ದರು. ಜತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ಎಫ್‌ಐಆರ್‌ ಆಧರಿಸಿ ತಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಎಸಿಬಿಗೆ ನಿರ್ದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಈ ಹಿಂದೆ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು.

click me!