
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ತೊಂದರೆಯಲ್ಲಿರುವ ರಾಜ್ಯದ 23 ಜಿಲ್ಲೆಗಳ 86 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ.
ಘೋಷಿತ 86 ತಾಲ್ಲೂಕುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿವರೆಗೆ ಬರ ಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ.
ಬರದ ತೀವ್ರತೆಯನ್ನು ಅಂದಾಜಿಸಲು ಸಂಬಂಧಪಟ್ಟಜಿಲ್ಲಾಧಿಕಾರಿಗಳು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಬರ ನಿರ್ವಹಣೆ ಕೈಪಿಡಿ-2016 ಹಾಗೂ ಪರಿಷ್ಕೃತ ಕೈಪಿಡಿಯಲ್ಲಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಲಾಗಿದೆ.
ಬರ ಪೀಡಿತ ಪ್ರದೇಶಗಳೆಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಕುಡಿಯುವ ನೀರು ಸರಬರಾಜು, ಮೇವು ಸರಬರಾಜು ಮತ್ತು ಜಾನುವಾರು ಸಂರಕ್ಷಣೆ ಇತ್ಯಾದಿ ಬರ ಪರಿಹಾರ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯ ಪ್ರಕಾರ ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ (ಜೂನ್ 1ರಿಂದ ಸೆಪ್ಟೆಂಬರ್ 6) ರಾಜ್ಯದಲ್ಲಿ ವಾಡಿಕೆಗಿಂತ ಶೇ. ಎರಡರಷ್ಟುಹೆಚ್ಚು ಮಳೆಯಾಗಿದ್ದರೂ ಸಹ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 31 ರಷ್ಟುಕಡಿಮೆ ಮಳೆಯಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 12 ರಷ್ಟುಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, 62.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಪ್ರದೇಶದಲ್ಲಿ ತೇವಾಂಶದ ಕೊರತೆಯಿಂದ ಬೆಳೆ ನಷ್ಟವಾಗಿತ್ತು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸೆ. 11 ರಂದು ನಡೆದ ಸಚಿವ ಸಂಪುಟದ ಉಪಸಮಿತಿ ಸಭೆ ರಾಜ್ಯದ 23 ಜಿಲ್ಲೆಗಳ 86 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ತೀರ್ಮಾನಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.