ಬಂಧನ ಭೀತಿಯಿಂದ ರಹಸ್ಯ ಸ್ಥಳದಲ್ಲಿ ಕೆ.ಜೆ.ಜಾರ್ಜ್?

Published : Oct 28, 2017, 04:43 PM ISTUpdated : Apr 11, 2018, 12:56 PM IST
ಬಂಧನ ಭೀತಿಯಿಂದ ರಹಸ್ಯ ಸ್ಥಳದಲ್ಲಿ ಕೆ.ಜೆ.ಜಾರ್ಜ್?

ಸಾರಾಂಶ

* ಡಿವೈಎಸ್'ಪಿ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್'ಗೆ ಬಂಧನಭೀತಿ? * ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ * ಕೋರ್ಟ್'ನಲ್ಲಿ ಅರ್ಜಿ ವಿಚಾರಣೆ ನಡೆಯುವವರೆಗೂ ರಹಸ್ಯ ಸ್ಥಳದಲ್ಲಿ ಜಾರ್ಜ್

ಬೆಂಗಳೂರು(ಅ. 28): ಡಿವೈಎಸ್ಪಿ ಗಣಪತಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು ಕೆ.ಜೆ.ಜಾರ್ಜ್ ಯಾವಾಗ ಬೇಕಾದರೂ ಬಂಧಿತರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆನ್ನಲಾಗಿದೆ. ಕಳೆದ ಎರಡು ದಿನಗಳಿಂದ ಜಾರ್ಜ್ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ಸದ್ಯ ಅವರು ದೂರ ಉಳಿದಿದ್ದಾರೆ. ಮೂಲಗಳ ಪ್ರಕಾರ, ಜಾರ್ಜ್ ಅವರು ಯಾವುದೇ ರಹಸ್ಯ ಸ್ಥಳದಲ್ಲಿದ್ದಾರೆ. ಜಾಮೀನು ಅರ್ಜಿ ಸಲ್ಲಿಸಿ ಕೋರ್ಟ್'ನಲ್ಲಿ ವಿಚಾರಣೆ ನಡೆಯುವವರೆಗೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದಾರಂತೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಾಗ, ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ಕೋರ್ಟ್'ಗೆ ಜಾರ್ಜ್ ಮನವಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

2016ರಲ್ಲಿ ಡಿವೈಎಸ್ಪಿ ಗಣಪತಿ ಅವರು ಮಡಿಕೇರಿಯ ಲಾಡ್ಜ್'ವೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿಗೆ ಮುನ್ನ ಅದೇ ದಿನದಂದು ಅವರು ಸ್ಥಳೀಯ ಟಿವಿ ಚಾನೆಲ್'ವೊಂದಕ್ಕೆ ಸಂದರ್ಶನ ನೀಡಿ ಆಗಿನ ಗೃಹಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲ, ತನ್ನ ಜೀವಕ್ಕೆ ಅಪಾಯವಿದ್ದು, ತಾನೇನಾದರೂ ಸಾವನ್ನಪ್ಪಿದರೆ ಅದಕ್ಕೆ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಎಎಂ ಪ್ರಸಾದ್ ಅವರೇ ಕಾರಣರು ಎಂದೂ ಡಿವೈಎಸ್ಪಿ ಹೇಳಿದ್ದರು. ಈ ವಿಡಿಯೋ ರಾಜ್ಯ ಹಾಗೂ ರಾಷ್ಟ್ರದ ಎಲ್ಲಾ ಟಿವಿ ಚಾನೆಲ್'ಗಳಲ್ಲೂ ಪ್ರಸಾರವಾಯಿತು.

ಘಟನೆ ನಡೆದ ಬಳಿಕ ರಾಜ್ಯ ಸರಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತು. ಕೆ.ಜೆ.ಜಾರ್ಜ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೂಡ ಕೊಟ್ಟರು. ತನಿಖೆ ನಡೆಸಿದ ಸಿಐಡಿ ಕೆಲ ತಿಂಗಳಲ್ಲೇ ವರದಿ ನೀಡಿ, ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡುತ್ತದೆ. ಆ ನಂತರ ಜಾರ್ಜ್ ಅವರು ಮತ್ತೆ ಸಂಪುಟಕ್ಕೆ ಸೇರುತ್ತಾರೆ. ಇದೇ ವೇಳೆ, ಗಣಪತಿ ಪುತ್ರ ಸುಪ್ರೀಮ್'ಕೋರ್ಟ್'ಗೆ ಹೋಗಿ ಪ್ರಕರಣದ ಮರುತನಿಖೆ ನಡೆಸುವಂತೆ ಮನವಿ ಮಾಡುತ್ತಾರೆ. ಸುಪ್ರೀಂಕೋರ್ಟ್ ಇದಕ್ಕೆ ಒಪ್ಪುತ್ತದೆ. ಪ್ರಕರಣದಲ್ಲಿ ಸಿಐಡಿ ನಡೆಸಿದ ತನಿಖೆಯಲ್ಲಿ ಸಾಕಷ್ಟು ಲೋಪಗಳಿದ್ದು, ಮತ್ತೊಮ್ಮೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಿಐಡಿಯಿಂದ ಹಿಂದಿನ ತನಿಖಾ ವರದಿಯ ದಾಖಲೆಗಳನ್ನು ಪಡೆದುಕೊಂಡಿರುವ ಸಿಐಡಿ ಎಲ್ಲಾ ಆರೋಪಿಗಳ ವಿರುದ್ಧ ಎಫ್'ಐಆರ್ ದಾಖಲಿಸಿ ಪ್ರಕರಣದ ತನಿಖೆ ಶುರುಹಚ್ಚಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌