
ಬೆಂಗಳೂರು: ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಪತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಪತ್ನಿಯನ್ನು ಪತಿಯೇ ಪೊಲೀಸರಿಗೆ ಹಿಡಿದುಕೊಟ್ಟಿರುವ ಪ್ರಕರಣವಿದು.
ಪತಿ ನೀಡಿದ ದೂರಿನ ಮೇರೆಗೆ ಜಾರ್ಖಂಡ್ ಮೂಲದ ಆ್ಯಂಡ್ರಿಲಾ ದಾಸ್ ಗುಪ್ತಾಳನ್ನು (29) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈಕೆ ಖ್ಯಾತ ಉದ್ಯಮಿಗಳ ಸೋಗಿನಲ್ಲಿ ಅಮಾಯಕರಿಗೆ ₹48 ಲಕ್ಷ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಖಾಸಗಿ ಕಂಪನಿ ಉದ್ಯೋಗಿಯನ್ನು ವಿವಾಹವಾಗಿದ್ದ ಆ್ಯಂಡ್ರಿಲಾ ದಾಸ್ ಸಿ.ವಿ. ರಾಮನ್ ನಗರದಲ್ಲಿ ನೆಲೆಸಿದ್ದಳು. ಉದ್ಯಮಿಗಳ ಹೆಸರಿನಲ್ಲಿ ಹಾಗೂ ಅವರ ಇ- ಮೇಲ್ ಹೋಲು ವಂತೆ ನಕಲಿ ಇ- ಮೇಲ್ ಐಡಿ ತೆರೆದು ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದಳು.
ಅವರಿಂದ ಮುಂಗಡವಾಗಿ ಠೇವಣಿ ಪಾವತಿ ಮಾಡಬೇಕೆಂದು ತನ್ನ ಪತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಳು. ನಂತರ ಪತಿಗೆ ಗೊತ್ತಿಲ್ಲದಂತೆ ತನ್ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಳು.
ಇತ್ತೀಚೆಗೆ ಪತಿ ತನ್ನ ಬ್ಯಾಂಕ್ ಖಾತೆ ಸ್ಟೇಟ್’ಮೆಂಟ್ ಪರಿಶೀಲನೆ ನಡೆಸಿದಾಗ ₹42 ಲಕ್ಷ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಅನುಮಾನ ಬಂದು ಪತ್ನಿಯ ಅವ್ಯವಹಾರದ ಕುರಿತು ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೈಬರ್ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು. ನಗರದ ವಿವಿಧ ಠಾಣೆಯಲ್ಲಿ ಮಹಿಳೆ ಹಲವು ಮಂದಿ ಬಳಿ ನೆಪ ಹೇಳಿ ಹಣ ಪಡೆದು ವಂಚಿಸಿದ್ದಾಳೆ. ಈ ಸಂಬಂಧ ಹೆಣ್ಣೂರು, ಭಾರತಿನಗರ, ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಹೋಟೆಲ್ ಬಿಲ್ ಕೊಡದೆ ಪರಾರಿ:
ಹರಿಯಾಣದ ಫರೀದಾಬಾದ್‌ನ ಸೂರಜ್‌ಕುಂಡ್‌ನಲ್ಲಿ ವಿವಾಂತ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿತೆ ಯಾರಿಗೂ ಗೊತ್ತಿಲ್ಲದಂತೆ ಬಿಲ್ ಪಾವತಿ ಮಾಡದೆ ಪರಾರಿಯಾಗಿದ್ದಳು. ಈ ಸಂಬಂಧ ಹೋಟೆಲ್ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದರು. ಸ್ನೇಹಿತರು ಮತ್ತು ಪರಿಚಿತ ವ್ಯಕ್ತಿಗಳಿಗೆ ಕರೆ ಮಾಡಿ ತನ್ನ ಗಂಡನಿಗೆ ಕ್ಯಾನ್ಸರ್ ಇದ್ದು, ಚಿಕಿತ್ಸೆಗಾಗಿ ಹಣಬೇಕೆಂದು ನಂಬಿಸಿದ್ದರೆ ಮತ್ತೊಬ್ಬರಿಗೆ ತನ್ನ ಮಗಳಿಗೆ ಆಯೋಗ್ಯ ಸರಿ ಇಲ್ಲ ಎಂದು ಹಣ ಪಡೆಯುತ್ತಿದ್ದಳು. ಇನ್ನು ಕೆಲವರಿಗೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ತುರ್ತಾಗಿ ಊರಿಗೆ ಹೋಗಬೇಕಾಗಿದೆ. ತಕ್ಷಣ ಏರ್ ಟಿಕೆಟ್ ಬುಕ್ ಮಾಡಿಕೊಡುವಂತೆ ದೂರವಾಣಿಯಲ್ಲಿ ಸಂಪರ್ಕ ಮಾಡಿ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ್ದಾಗಿ ನಕಲಿ ಸಂದೇಶ ರವಾನೆ ಮಾಡಿ ವಂಚಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.