
ತಿರುವನಂತಪುರ[ಡಿ.02]: ಇತ್ತೀಚೆಗಷ್ಟೇ ಅಯ್ಯಪ್ಪ ದರ್ಶನಕ್ಕೆ ಶಬರಿಮಲೆಗೆ ಆಗಮಿಸಿದ್ದ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರ ಜೊತೆ ತೀವ್ರ ವಾಕ್ಸಮರ ನಡೆಸಿ ಸುದ್ದಿಯಾಗಿದ್ದ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ ಎಸ್‌ಪಿ ಯತೀಶ್ ಚಂದ್ರ ಅವರಿಗೆ ಕೇರಳ ಸರ್ಕಾರ ಪ್ರಶಂಸನಾ ಪತ್ರ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ, ಶಬರಿಮಲೆಯಲ್ಲಿ ಕಾರ್ಯನಿರ್ವಹಿಸಿದ ರೀತಿಯ ಬಗ್ಗೆ ಯತೀಶ್ ಅವರನ್ನು ಹಾಡಿ ಹೊಗಳಿದೆ. ಯತೀಶ್ ವರ್ತನೆ ಬಗ್ಗೆ ಇತ್ತೀಚೆಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಅವರನ್ನು ಕೇರಳ ಸರ್ಕಾರ ಶಬರಿಮಲೆಯ ಭದ್ರತಾ ಹೊಣೆಯಿಂದ ಬೇರೆಡೆಗೆ ವರ್ಗಾಯಿಸಿತ್ತು.
ಇದನ್ನೂ ಓದಿ: ನಾನೂ ಅಯ್ಯಪ್ಪ ಭಕ್ತ, ಕರ್ತವ್ಯಕ್ಕೆ ಜಾತಿ ಇಲ್ಲ : ಕನ್ನಡಿಗ ಸಿಂಗಂ
ಅಂದು ಆಗಿದ್ದೇನು?
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಹೋಗುವ ಸಲುವಾಗಿ ಕೇಂದ್ರ ಹಡಗು ಹಾಗೂ ಹಣಕಾಸು ಖಾತೆ ರಾಜ್ಯ ಸಚಿವರಾಗಿರುವ ರಾಧಾಕೃಷ್ಣನ್ ಅವರು ಬುಧವಾರ ನೀಲಕ್ಕಲ್‌ಗೆ ಆಗಮಿಸಿದ್ದರು. ಈ ವೇಳೆ ಶಬರಿಮಲೆಯಿಂದ 20 ಕಿ.ಮೀ. ದೂರದಲ್ಲಿರುವ ನೀಲಕ್ಕಲ್‌ನಿಂದ ಪಂಪಾ ತಲುಪಿ ಅಲ್ಲಿಂದ ಅಯ್ಯಪ್ಪ ದೇಗುಲಕ್ಕೆ ಭಕ್ತರು ಹೋಗುತ್ತಾರೆ. ನೀಲಕ್ಕಲ್‌ನ ಪರಿಸ್ಥಿತಿ ಪರಾಮರ್ಶೆ ನಡೆಸಿದ ರಾಧಾಕೃಷ್ಣನ್ ಅವರು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಮಾತ್ರ ಪಂಪಾವರೆಗೆ ಏಕೆ ಅವಕಾಶ ಕಲ್ಪಿಸುತ್ತಿದ್ದೀರಿ? ಖಾಸಗಿ ವಾಹನಗಳೂ ಹೋಗಲು ಬಿಡಿ ಎಂದು ಸೂಚಿಸಿದ್ದರು. ಅಲ್ಲದೆ ಈ ರೀತಿಯ ನಿರ್ಬಂಧದ ಮೂಲಕ ಭಕ್ತರಿಗೆ ಕಿರುಕುಳ ನೀಡುತ್ತಿದ್ದೀರಿ ಎಂದು ದಬಾಯಿಸಿದ್ದರು.
ಇದನ್ನೂ ಓದಿ: ಕರ್ನಾಟಕದ ಸಿಗಂ ವಿರುದ್ಧ ಬಿಜೆಪಿ ಗರಂ
ಈ ವೇಳೆ ಯತೀಶ್ ಚಂದ್ರ ಅವರು ಸಚಿವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ಆಗಸ್ಟ್‌ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಪಂಪಾದಲ್ಲಿನ ವಾಹನ ನಿಲುಗಡೆ ತಾಣ ಕೊಚ್ಚಿ ಹೋಗಿದೆ. ಹೀಗಾಗಿ ಬಸ್‌ಗಳನ್ನು ಮಾತ್ರ ಅಲ್ಲಿಗೆ ಬಿಡಲಾಗುತ್ತಿದೆ. ಭಕ್ತರನ್ನು ಒಯ್ಯುವ ಬಸ್‌ಗಳು ಅಲ್ಲಿ ಅವರನ್ನು ಇಳಿಸಿ, ಅತ್ತ ಕಡೆಯಿಂದಲೂ ಭಕ್ತರನ್ನು ವಾಪಸ್ ಕರೆತರುತ್ತವೆ. ಖಾಸಗಿ ವಾಹನಗಳಿಗೆ ಅವಕಾಶ ಮಾಡಿಕೊಟ್ಟರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಯಾತ್ರಾರ್ಥಿಗಳಿಗೇ ತೊಂದರೆಯಾಗುತ್ತದೆ ಎಂದರು. ಬೇಕಿದ್ದರೆ ಸಚಿವರ ಅಧಿಕೃತ ವಾಹನಕ್ಕೆ ಅವಕಾಶ ಮಾಡಿಕೊಡುತ್ತೇವೆ ಸ್ಪಷ್ಟಪಡಿಸಿದ್ದರು. ಆದರೂ ಸಚಿವರು ಪಟ್ಟು ಬಿಡದೇ ಇದ್ದಾಗ, ಖಾಸಗಿ ವಾಹನಗಳಿಗೆ ಅನುಮತಿ ಕೊಡಿ ಎಂದು ಲಿಖಿತ ಹೇಳಿಕೆ ಕೊಟ್ಟರೆ ಸಮ್ಮತಿ ಸೂಚಿಸುತ್ತೇವೆ ಎಂದು ಯತೀಶ್ ಹೇಳಿದರು. ಆಗ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಏನೂ ತೋಚದ ಸಚಿವರು ನಿಯಮದ ಅನ್ವಯ ಬಸ್‌ನಲ್ಲೇ ಪಂಪಾ ಕಡೆಗೆ ತೆರಳಿದ್ದರು.
ಈ ವಿಚಾರ ದೇಶದಾದ್ಯಂತ ಸದ್ದು ಮಾಡಿತ್ತು.ಈ ಘಟನೆಯ ಬಳಿಕ ಅವರನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿಯು ಕೋಪಗೊಂಡಿತ್ತು, ಮತ್ತೊಂದೆಡೆ ಯತೀಶ್ ಅವರನ್ನು ಕಂಡರೆ ಬುಸುಗುಡುತ್ತಿದ್ದ ಎಡರಂಗ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ