ಭದ್ರಕೋಟೆಯಲ್ಲಿ ಜೆಡಿಎಸ್ಸಿಗೆ ಕಾಂಗ್ರೆಸ್‌ ಒಳ ಏಟು ಭೀತಿ

By Web DeskFirst Published Oct 27, 2018, 11:58 AM IST
Highlights

ಮೈಸೂರು ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರೇ ಇದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿದ್ದರಿಂದ ಬೆಂಬಲ ನೀಡಿರುವ ಕಾಂಗ್ರೆಸ್ಸಿನ ನೇರ ಪೈಪೋಟಿ ಜೆಡಿಎಸ್‌ಗೆ ಇಲ್ಲದಿದ್ದರೂ ಕಾಂಗ್ರೆಸ್ಸಿನ ಆಂತರಿಕ ಬೇಗುದಿಯ ಆತಂಕವಂತೂ ಇದ್ದೇ ಇದೆ.

ಮಂಡ್ಯ :  ಹಳೆ ಮೈಸೂರು ಭಾಗದ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಮಂಡ್ಯದಲ್ಲಿ ಎದುರಾಗಿರುವ ಲೋಕಸಭಾ ಕ್ಷೇತ್ರದ ಉಪಚುನಾವಣೆ ಜೆಡಿಎಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರೇ ಇದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿದ್ದರಿಂದ ಬೆಂಬಲ ನೀಡಿರುವ ಕಾಂಗ್ರೆಸ್ಸಿನ ನೇರ ಪೈಪೋಟಿ ಜೆಡಿಎಸ್‌ಗೆ ಇಲ್ಲದಿದ್ದರೂ ಕಾಂಗ್ರೆಸ್ಸಿನ ಆಂತರಿಕ ಬೇಗುದಿಯ ಆತಂಕವಂತೂ ಇದ್ದೇ ಇದೆ.

ಮೇಲ್ನೋಟಕ್ಕೆ ಕಾಣುವಂತೆ ಇಲ್ಲಿ ಜೆಡಿಎಸ್‌ ಗೆಲ್ಲುವ ಸಾಧ್ಯತೆಯೇ ಹೆಚ್ಚು. ಆದರೆ, ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಕಾಂಗ್ರೆಸ್‌ ಮುಖಂಡರು ಒಳಗೊಳಗೇ ವಿರೋಧ ಮಾಡಿದರೂ ಅದು ಜೆಡಿಎಸ್‌ ಪಕ್ಷವನ್ನು ಸೋಲಿಸುವ ಮಟ್ಟಕ್ಕೆ ಹೋಗಲಾರದು ಎಂಬ ಭಾವನೆ ಕ್ಷೇತ್ರದಾದ್ಯಂತ ಸಂಚರಿಸಿದಾಗ ಕಂಡುಬರುತ್ತದೆ. ಜೆಡಿಎಸ್‌ ಅಧಿಕಾರದಲ್ಲಿರುವ ಪಕ್ಷ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ. ಹೀಗಿರುವಾಗ ಕ್ಷೇತ್ರದ ಜನರು ಜೆಡಿಎಸ್‌ ಪಕ್ಷವನ್ನು ಸುಲಭವಾಗಿ ಬಿಟ್ಟುಕೊಡಲಾರರು ಎಂಬ ಭಾವನೆ ಸಾರ್ವತ್ರಿಕವಾಗಿದೆ. ಒಂದು ವೇಳೆ ಪವಾಡ ನಡೆದಲ್ಲಿ ಮಾತ್ರ ಪ್ರತಿಪಕ್ಷ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಮಾಲೆ ಬೀಳಬಹುದು ಎನ್ನುವ ವಾತಾವರಣವಿದೆ.

ಸಕ್ಕರೆ ನಾಡಿನ ಜನರು ಎದುರಿಸುವ ಲೋಕಸಭೆಯ 3ನೇ ಉಪಚುನಾವಣೆ ಇದು. ಕಳೆದ ಬಾರಿ ಜೆಡಿಎಸ್‌ ಸಂಸದರಾಗಿದ್ದ ಸಿ.ಎಸ್‌.ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಪುಟ್ಟರಾಜು ಇದೀಗ ಜಿಲ್ಲಾ ಉಸ್ತುವಾರಿ ಸಚಿವರು.

ಅಭಿವೃದ್ಧಿ ಶೂನ್ಯ ಜಿಲ್ಲೆ:

ಹತ್ತಾರು ಸಮಸ್ಯೆಗಳ ಅಭಿವೃದ್ಧಿ ಶೂನ್ಯ ಜಿಲ್ಲೆ ಎಂಬ ಹಣೆ ಪಟ್ಟಿಯೂ ಮಂಡ್ಯಕ್ಕೆ ಇದೆ. ಜೆಡಿಎಸ್‌ಗೆ ಭಾರಿ ಬೆಂಬಲ ನೀಡಿದ ಜಿಲ್ಲೆಯ ಜನರಿಗೆ ನಿರಾಶೆಯಾಗಿದೆ. ಜೊತೆಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಗತಿಸಿದರೂ ಅಭಿವೃದ್ಧಿಗೆ ಒಂದು ಸಣ್ಣ ಬುನಾದಿ ಕೂಡ ಹಾಕಿಲ್ಲ. ಬರೀ ಭರವಸೆಯ ಮಾತುಗಳಲ್ಲೇ ಅರಮನೆ ಕಟ್ಟಿಕೊಡುವ ಪ್ರಯತ್ನ ನಡೆದಿರುವಾಗಲೇ ಉಪ ಚುನಾವಣೆ ಆಡಳಿತ ಪಕ್ಷ ಜೆಡಿಎಸ್‌ಗೆ ಅಗ್ನಿ ಪರೀಕ್ಷೆಯೂ ಆಗಿದೆ.

ರೈತರ ಸಾಲ ಮನ್ನಾಕ್ಕೆ ಒಂದು ನಿರ್ದಿಷ್ಟರೂಪ, ಸ್ಪಷ್ಟತೆ ಸಿಕ್ಕಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ 20 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಗಟ್ಟಲೆ ಕ್ಯುಸೆಕ್‌ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಆದರೆ, ಜಿಲ್ಲೆಯ 6 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂಗಾರು - ಹಿಂಗಾರು ಎರಡೂ ಮಳೆಗಳು ಕಾಲಕ್ಕೆ ಸರಿಯಾಗಿ ಬರಲಿಲ್ಲ. ನೀರಾವರಿ ಪ್ರದೇಶದ ರೈತರು ಮಾತ್ರ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಿದ್ದಾರೆ. ಉಳಿದಂತೆ ಮಳೆಯಾಶ್ರಿತ ರೈತರು ಈಗಲೂ ಕಷ್ಟಕ್ಕೆ ನಲುಗಿಹೋಗಿದ್ದಾರೆ. ಇದು ಜಿಲ್ಲೆಯ ವಾಸ್ತವ ಚಿತ್ರಣ.

ಮೈತ್ರಿ ಫಲಶ್ರುತಿ ಏನು?:

ಜಿಲ್ಲೆಯ ರಾಜಕಾರಣದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಯಾವಾಗಲೂ ಎಣ್ಣೆ, ಸೀಗೆಕಾಯಿ ಇದ್ದ ಹಾಗೆ. ಈ ಬಾರಿ ಮಾತ್ರ ಬಿಜೆಪಿಯನ್ನು ಬಗ್ಗುಬಡಿಯುವ ನೆಪದಲ್ಲಿ ಇಬ್ಬರೂ ಮೈತ್ರಿ ಮಾಡಿಕೊಂಡು ಮೈತ್ರಿ ಧರ್ಮ ಪಾಲಿಸುವ ತಂತ್ರ ಮಾಡಿದ್ದಾರೆ. ರಾಜ್ಯದಲ್ಲಿ ಎರಡೂ ಪಕ್ಷಗಳ ನಾಯಕರು ಒಂದಾದಷ್ಟುಬೇಗ, ಜಿಲ್ಲಾ, ತಾಲೂಕು ಮಟ್ಟದ ನಾಯಕರು ಮತ್ತು ಕೆಳ ಹಂತದ ಕಾರ್ಯಕರ್ತರು ಒಂದಾಗುವುದು ಕಷ್ಟದ ಮಾತು. ಸ್ಥಳೀಯವಾಗಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರ ಒಳ ಮನಸ್ಸು ಮಾತ್ರ ಜೆಡಿಎಸ್‌ ಜೊತೆ ಹೋಗಲು ಸುತರಾಂ ಒಪ್ಪುತ್ತಿಲ್ಲ.

ಕಾಂಗ್ರೆಸ್‌ ಮಂಡ್ಯದಲ್ಲೂ ಪ್ರಬಲವಾಗಿದೆ. ಕಳೆದ ಚುನಾವಣೆಯಲ್ಲಿ ಯಾವ ಸ್ಥಾನವನ್ನೂ ಗೆಲ್ಲದೇ ಇರಬಹುದು. ಏಳು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಜೆಡಿಎಸ್‌ ಬೀಗಿರಬಹುದು. ಆದರೆ ಈ ಗೆಲವು ಶಾಶ್ವತ ಅಲ್ಲ. ಕಾಂಗ್ರೆಸ್‌ ನಾಯಕರ ವೈಫಲ್ಯ, ದೇವೇಗೌಡ, ಕುಮಾರಸ್ವಾಮಿ ಅವರ ಬಗ್ಗೆ ಅನುಕಂಪದ ಪರಿಣಾಮ ಕಾಂಗ್ರೆಸ್‌ಗೆ ವಿರುದ್ಧವಾದ ಫಲಿತಾಂಶವನ್ನು ಜನ ನೀಡಿದರು. ಈಗ ಕಾಲ, ಸನ್ನಿವೇಶ ಬದಲಾಗಿದೆ. ಮಂಡ್ಯದ ಪ್ರಜ್ಞಾವಂತ ಮತದಾರರು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ನೇರ ಹಣಾಹಣಿ:

ಮಂಡ್ಯ ಲೋಕಸಭಾ ಕ್ಷೇತ್ರದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಎಲ್‌.ಆರ್‌. ಶಿವರಾಮೇಗೌಡ ಸ್ಪರ್ಧೆ ಮಾಡಿದ್ದಾರೆ. 22 ವರ್ಷದಿಂದ ಅಧಿಕಾರ ವಂಚಿತ ಶಿವರಾಮೇಗೌಡ ಈ ಬಾರಿ ಸಂಸತ್‌ ಮೆಟ್ಟಿಲು ತುಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಗೆಲುವಿನ ಬಗ್ಗೆ ಅದಮ್ಯ ವಿಶ್ವಾಸ ಹೊಂದಿದ್ದಾರೆ.

ಬಿಜೆಪಿಯಿಂದ ಹೊಸ ಮುಖ ಎಂಬ ಟ್ಯಾಗ್‌ ಹಚ್ಚಿಕೊಂಡಿರುವ ಡಾ.ಸಿದ್ದರಾಮಯ್ಯನವರ ಕುಟುಂಬ ಜಿಲ್ಲೆಯ ರಾಜಕಾರಣಕ್ಕೆ ಅತ್ಯಂತ ಹಳೆಯದು. ರಾಜ್ಯ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಮಾಡಿ ನಿವೃತ್ತರಾಗಿರುವ ಡಾ.ಸಿದ್ದರಾಮಯ್ಯನವರ ಸರಳ, ಸಜ್ಜನಿಕೆಯು ಜನಪ್ರಿಯತೆಗೆ ನೆರವಾಗಿದೆ. ಇವರ ದೊಡ್ಡಪ್ಪ ದೊಡ್ಡಬೋರೇಗೌಡರು 1967ರಲ್ಲಿ ಶ್ರೀರಂಗಪಟ್ಟಣ ಹಾಗೂ 1983ರಲ್ಲಿ ಮಂಡ್ಯ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಅಚ್ಚರಿಯ ಫಲಿತಾಂಶವನ್ನು ಜನ ಕೊಡುತ್ತಾರೆಂಬ ಬಲವಾದ ನಂಬಿಕೆ ಇವರಿಗಿದೆ.
ಕಣದಲ್ಲಿ 9 ಅಭ್ಯರ್ಥಿಗಳು

ಎಲ್ ಆರ್‌. ಶಿವರಾಮೇಗೌಡ ಜೆಡಿಎಸ್‌-ಕಾಂಗ್ರೆಸ್‌

ಡಾ.ಸಿದ್ದರಾಮಯ್ಯ- ಬಿಜೆಪಿ

ಪಕ್ಷೇತರರು- ನಂದೀಶ್‌ ಕುಮಾರ್‌, ಎಂ.ಹೊಣ್ಣೇಗೌಡ, ಕೌಡ್ಲೆ ಚನ್ನಪ್ಪ, ಬಿ.ಎಸ್‌.ಗೌಡ, ಶಂಭುಲಿಂಗೇಗೌಡ (ಗಾಂಧಿವಾದಿ), ನವೀನ್‌ ಕುಮಾರ್‌ ಹಾಗೂ ಕೆ.ಎಸ್‌.ರಾಜಣ್ಣ

ಒಟ್ಟು ಮತದಾರರು

16,81,678

ಪುರುಷರು- 8,42,017

ಮಹಿಳೆಯರು- 8,39,519

ಇತರೆ- 142

ವಿಧಾನಸಭಾ ಕ್ಷೇತ್ರಗಳು

ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಕೆ.ಆರ್‌. ಪೇಟೆ, ಮೇಲುಕೋಟೆ, ಮಳವಳ್ಳಿ, ಮದ್ದೂರು ಹಾಗೂ ಮೈಸೂರು ಜಿಲ್ಲೆಯ ಕೆ.ಆರ್‌. ನಗರ

ಜಾತಿವಾರು ಪ್ರಾಬಲ್ಯ

8ರಿಂದ 10 ಲಕ್ಷ ಒಕ್ಕಲಿಗರು

3.50 ಲಕ್ಷ ದಲಿತರು

1 ಲಕ್ಷ ಲಿಂಗಾಯತರು

1 ಲಕ್ಷ ಕುರುಬರು

80 ಸಾವಿರ ಮುಸ್ಲಿಮರು

40 ಸಾವಿರ ಬೆಸ್ತರು

30 ಸಾವಿರ ಬ್ರಾಹ್ಮಣರು

30 ಸಾವಿರ ವಿಶ್ವಕರ್ಮ

30 ಸಾವಿರ ಕ್ರೈಸ್ತರು

10 ಸಾವಿರ ಈಡಿಗರು

ಇತರರು 1.30 ಲಕ್ಷ

ಮತದಾರರು ಎಷ್ಟಿದ್ದಾರೆ?

* ಮಂಡ್ಯ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರ ಹಾಗೂ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 16,81,678 ಮತದಾರರಿದ್ದಾರೆ. 8,42,017 ಪುರುಷ, 8,39,519 ಮಹಿಳೆ, 142 ಇತರೆ ಹಾಗೂ 717 ಸೇವಾ ಮತದಾರರಿದ್ದಾರೆ.

- ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿ- ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ನೆರೆಯ ಮೈಸೂರು ಜಿಲ್ಲೆಯ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರ.

- ರಾಜಕೀಯ ಪಕ್ಷಗಳ ಬಲಾಬಲ- ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

- ಮತದಾರರ ಸಂಖ್ಯೆ- 16,81,678 (8,42,017 ಪುರುಷರು, 8,39,519 ಮಹಿಳೆಯರು, 142 ಇತರರು ಹಾಗೂ 717 ಸೇವಾ ಮತದಾರರು)

ವರದಿ :  ಕೆ.ಎನ್‌.ರವಿ

click me!