ಸಚಿವಾಲಯದ 100 ಸಿಬ್ಬಂದಿಗೆ ಎಂಟು ತಿಂಗಳಿಂದ ಸಂಬಳವಿಲ್ಲ

By Web DeskFirst Published Oct 27, 2018, 11:36 AM IST
Highlights

ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕಾಲಾವಧಿಯಲ್ಲಿ 190ಕ್ಕೂ ಹೆಚ್ಚು ಸಿಬ್ಬಂದಿ ನೇಮಕಗೊಂಡಿದ್ದು, ಈ ಪೈಕಿ 104 ಮಂದಿಗೆ ವೇತನ ಸಿಗುತ್ತಿಲ್ಲ.

ಬೆಂಗಳೂರು :  ಪ್ರಸಕ್ತ 2017-18ನೇ ಸಾಲಿನಲ್ಲಿ ನೇಮಕಗೊಂಡರ ಪೈಕಿ 100ಕ್ಕೂ ಹೆಚ್ಚು ವಿಧಾನಸಭೆ ಸಚಿವಾಲಯದ ಸಿಬ್ಬಂದಿ ತಮಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗದಿರುವುದನ್ನು ಖಂಡಿಸಿ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಕೊಠಡಿ ಮುಂದೆ ಧರಣಿ ನಡೆಸಿದರು.

ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕಾಲಾವಧಿಯಲ್ಲಿ 190ಕ್ಕೂ ಹೆಚ್ಚು ಸಿಬ್ಬಂದಿ ನೇಮಕಗೊಂಡಿದ್ದು, ಈ ಪೈಕಿ 104 ಮಂದಿಗೆ ವೇತನ ಸಿಗುತ್ತಿಲ್ಲ. ವಾಹನ ಚಾಲಕರು, ಕಂಪ್ಯೂಟರ್‌ ಆಪರೇಟರ್‌, ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಈಗಾಗಲೇ ಸೇವೆಗೆ ಹಾಜರಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಧರಣಿ ನಡೆಸಿ ವೇತನಕ್ಕೆ ಒತ್ತಾಯಿಸಿದ ಧರಣಿ ನಿರತರು, ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಕೋರಿದರು.

ಈ ನಡುವೆ, ಮಾಜಿ ವಿಧಾನಸಭಾಧ್ಯಕ್ಷ ಕೋಳಿವಾಡ ಅವಧಿಯಲ್ಲಿ ನಡೆದಿರುವ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಹಣಕಾಸು ಇಲಾಖೆಯ ಸಮ್ಮತಿ ಇಲ್ಲದೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಹೀಗಾಗಿ ವೇತನ ಪಾವತಿಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಮೇಶ್‌ ಕುಮಾರ್‌, ಹಣಕಾಸು ಇಲಾಖೆಯ ಖಜಾನೆ-2 ತಂತ್ರಾಂಶದಲ್ಲಿ ದೋಷ ಕಂಡುಬಂದಿರು ಹಿನ್ನೆಲೆಯಲ್ಲಿ ವೇತನ ಪಾವತಿ ವಿಳಂಬವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಇತ್ಯರ್ಥ ಪಡಿಸಲಾಗುವುದು. ಮುಂದಿನ 15 ದಿನದಲ್ಲಿ ವೇತನ ಪಾವತಿಯಾಗದ ಸಿಬ್ಬಂದಿಗೆ ವೇತನ ಪಾವತಿಯಾಗುವ ಬಗ್ಗೆ ಕ್ರಮ ಜರುಗಿಸಲಾಗುವುದು. ಅಲ್ಲದೇ, ವಿಧಾನಸಭೆ ಸಚಿವಾಲಯದ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದರು.

click me!