ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್: ರಾಜ್ಯದಲ್ಲಿ ಬಸ್, ಶಾಲೆ, ಸಂತೆ, ಕಚೇರಿ ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

Published : Aug 12, 2026, 03:03 PM IST
Karnataka Bandh Vatal Nagaraj

ಸಾರಾಂಶ

ಕಾವೇರಿ ನೀರು ಹಂಚಿಕೆ ವಿರೋಧಿಸಿ ವಾಟಾಳ್ ನಾಗರಾಜ್ ಅವರು ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ಪ್ರಮುಖ ರೈತ, ಸಾರಿಗೆ ಮತ್ತು ಕನ್ನಡ ಸಂಘಟನೆಗಳು ಬೆಂಬಲ ಸೂಚಿಸದ ಕಾರಣ, ಬಂದ್ ವಿಫಲವಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜು, ಸಾರಿಗೆ ಸೇರಿದಂತೆ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.

ಬೆಂಗಳೂರು (ಆ.12): ರಾಜ್ಯದಲ್ಲಿ ಮತ್ತೆ 'ಕಾವೇರಿ ವಿವಾದ' ಬಿಸಿ ಪಡೆದುಕೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಳೆ (ಆಗಸ್ಟ್ 13, ಗುರುವಾರ) 'ಕರ್ನಾಟಕ ಬಂದ್' (Karnataka Bandh) ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರಾಜ್ಯದ ಪ್ರಮುಖ ರೈತ, ಸಾರಿಗೆ ಹಾಗೂ ಕನ್ನಡ ಸಂಘಟನೆಗಳು ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ನಾಳೆ ಬಂದ್ ಸಂಪೂರ್ಣ ಫ್ಲಾಪ್ ಆಗುವ ಸಾಧ್ಯತೆಯಿದ್ದು, ರಾಜ್ಯಾದ್ಯಂತ ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿ ಇರಲಿದೆ.

ಬಂದ್‌ಗೆ ಪ್ರಮುಖ ಸಂಘಟನೆಗಳ ಬೆಂಬಲ ಸಿಗದ ಕಾರಣ ಶಾಲಾ-ಕಾಲೇಜುಗಳು, ಸಾರಿಗೆ ಸೇವೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಯಥಾರೀತಿ ನಡೆಯಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

ನಾಳೆ ಏನಿರುತ್ತೆ? (ಸೇವೆಗಳು ಲಭ್ಯ):

ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ:

ಸಾರಿಗೆ ಸೇವೆಗಳು: KSRTC, BMTC ಬಸ್‌ಗಳು, ನಮ್ಮ ಮೆಟ್ರೋ (Namma Metro), ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ (Ola/Uber) ಸೇವೆಗಳು ಎಂದಿನಂತೆ ಲಭ್ಯವಿರಲಿವೆ.

ಆರೋಗ್ಯ ಸೇವೆಗಳು: ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.

ಶಿಕ್ಷಣ ಸಂಸ್ಥೆಗಳು: ಶಾಲಾ-ಕಾಲೇಜುಗಳಿಗೆ ಯಾವುದೇ ಅಧಿಕೃತ ರಜೆ ಘೋಷಣೆಯಾಗಿಲ್ಲ.

ಅಗತ್ಯ ಸರಕುಗಳು: ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಗಳು ಓಪನ್ ಇರಲಿವೆ.

ವಾಣಿಜ್ಯ ವಲಯ: ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಬಂದ್‌ಗೆ ಯಾರ ಬೆಂಬಲವಿದೆ?

  • ವಾಟಾಳ್ ನಾಗರಾಜ್ ನೇತೃತ್ವದ 'ಕನ್ನಡ ಸಂಘಟನೆಗಳ ಒಕ್ಕೂಟ'
  • ಕನ್ನಡ ಸೇನೆ
  • ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ.
  • ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ನೀಡಿದರೂ, ಪರೀಕ್ಷೆ ನಡೆಯುತ್ತಿರುವುದರಿಂದ ಶಾಲೆಗೆ ರಜೆ ನೀಡುವುದಿಲ್ಲ.
  • ಹೋಟೆಲ್ ಮಾಲೀಕ ಸಂಘಟನೆಗಳಿಂದಲ ನೈತಿಕ ಬೆಂಬಲವಿದ್ದರೂ ಸೇವೆಗಳನ್ನು ಬಂದ್ ಮಾಡುವುದಿಲ್ಲ.

ಯಾರ್ಯಾರ ಬೆಂಬಲವಿಲ್ಲ? (ಬಂದ್‌ನಿಂದ ದೂರ ಉಳಿದವರು):

ಈ ಬಾರಿಯ ಬಂದ್‌ಗೆ ರಾಜ್ಯದ ಪ್ರಭಾವಿ ಸಂಘಟನೆಗಳು ನೇರವಾಗಿ ವಿರೋಧ ವ್ಯಕ್ತಪಡಿಸಿವೆ ಅಥವಾ ದೂರ ಉಳಿದಿವೆ:

ಕನ್ನಡ ರಕ್ಷಣಾ ವೇದಿಕೆ (KRV): ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ ಹಾಗೂ ಶಿವರಾಮೇಗೌಡ ಬಣಗಳು ಬಂದ್‌ಗೆ ಬೆಂಬಲ ನೀಡುತ್ತಿಲ್ಲ.

ರೈತ ಹಾಗೂ ಚಲನಚಿತ್ರ ಸಂಘಟನೆಗಳು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ ಬಂದ್‌ನಿಂದ ದೂರ ಇರಲಿವೆ.

ಸಾರಿಗೆ ಹಾಗೂ ಶಿಕ್ಷಣ: ಖಾಸಗಿ ಸಾರಿಗೆ ಒಕ್ಕೂಟ, ಆಟೋ ಯೂನಿಯನ್‌ಗಳು ಹಾಗೂ ಖಾಸಗಿ ಶಾಲೆಗಳ ಒಕ್ಕೂಟಗಳಾದ 'ರುಪ್ಸಾ' (RUPSA) ಮತ್ತು 'ಕ್ಯಾಮ್ಸ್' (KAMS) ಬೆಂಬಲ ನೀಡಿಲ್ಲ.

ಹೋಟೆಲ್ ಅಸೋಸಿಯೇಷನ್: ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡಿದ್ದು, ಹೋಟೆಲ್‌ಗಳು ತೆರೆದಿರಲಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ನಾಳೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಾಂಕೇತಿಕ ಧರಣಿ ಹಾಗೂ ಪ್ರತಿಭಟನೆಗಳು ನಡೆಯಬಹುದೇ ವಿನಃ, ರಾಜ್ಯಾದ್ಯಂತ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ. ಜನಜೀವನ ಸಾಮಾನ್ಯ ದಿನಗಳಂತೆಯೇ ಇರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Expensive Plant: ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?
ಜೈಲಿನಲ್ಲೇ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು? ಪಾಕ್ ಪತ್ರಕರ್ತನ ವಿಡಿಯೋ ಕೋಲಾಹಲ