ಗುಂಡಿನ ದಾಳಿಗೆ ಬೆಚ್ಚಿ ರನ್‌ವೇಗೆ ಓಡಿದ್ರು: ಆಫ್ಘನ್‌ನಲ್ಲಿ ಕನ್ನಡಿಗನ ಕರಾಳ ಅನುಭವ

By Kannadaprabha NewsFirst Published Aug 23, 2021, 9:30 AM IST
Highlights

*  ಏರ್ಪೋರ್ಟಲ್ಲಿ ತಾಲಿಬಾನ್‌ ಗುಂಡಿನ ಮಳೆ ಸುರಿಸಿತು
*  ಆ.16ರ ರಾತ್ರಿ ಏಕಾಏಕಿ ಗುಂಡಿನ ದಾಳಿ
*  ವಿಮಾನ ನಿಲ್ದಾಣದಲ್ಲಿದ್ದವರು ಕಕ್ಕಾಬಿಕ್ಕಿಯಾಗಿ ರನ್‌ವೇಗೆ ಓಡಿದರು
 

ಮಂಗಳೂರು/ನವದೆಹಲಿ(ಆ.23):  ಆಫ್ಘಾನಿಸ್ತಾನದಲ್ಲಿ ಅಮೆರಿಕಾದ ಮುಝಾರಿ ಇ ಶರೀಫ್‌ ಸೇನಾ ಬೇಸ್‌ನಿಂದ ಕಾಬೂಲ್‌ನ ಸೇನಾ ನೆಲೆಗೆ ಆ.11ರಂದು ಕರೆಸಿಕೊಂಡಿದ್ದರು. ವಿಮಾನ ನಿಲ್ದಾಣದೊಳಗೆ ಸೇನಾಧಿಕಾರಿಗಳನ್ನು ಕರೆದುಕೊಂಡು ಹೋಗುವ ಮಿಲಿಟರಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆ.16ರ ರಾತ್ರಿ ಕರ್ತವ್ಯದಲ್ಲಿದ್ದಾಗ ಏಕಾಏಕಿ ತಾಲಿಬಾನಿಗಳು ಕಾಬೂಲ್‌ನ ನಾಗರಿಕ ವಿಮಾನ ನಿಲ್ದಾಣದತ್ತ ಗುಂಡು ಹಾರಾಟ ನಡೆಸಿದ್ದರು. ಇದರಿಂದ ದೇಶ ತೊರೆಯಲು ಹೊರಟ ಆಫ್ಘನ್ನರು ಕಕ್ಕಾಬಿಕ್ಕಿಯಾಗಿ ರನ್‌ವೇ ದಾಟಿ ಮಿಲಿಟರಿ ಬೇಸ್‌ ನಿಲ್ದಾಣಕ್ಕೆ ನುಗ್ಗಿದ್ದರು. ಇದರಿಂದಾಗಿ ಕಾಬೂಲ್‌ ವಿಮಾನ ನಿಲ್ದಾಣದಿಂದ ನಾಗರಿಕರನ್ನು ಏರ್‌ಲಿಫ್ಟ್‌ ಮಾಡಲು ಸಾಧ್ಯವಾಗಲಿಲ್ಲ.

-ಇದು 2011ರಿಂದ ಅಷ್ಘಾನಿಸ್ತಾನದಲ್ಲಿದ್ದ, ಕಾಬೂಲ್‌ ವಿಮಾನ ನಿಲ್ದಾಣಕ್ಕೆ ತಾಲಿಬಾನ್‌ ಆಕ್ರಮಣ ಬಗ್ಗೆ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಪ್ರತ್ಯಕ್ಷದರ್ಶಿ, ಸದ್ಯ ನವದೆಹಲಿ ತಲುಪಿರುವ ಮಂಗಳೂರಿನ ಮೂಡುಬಿದಿರೆ ಮೂಲದ ಜಗದೀಶ್‌ ಪೂಜಾರಿ ಭಾನುವಾರ ‘ಕನ್ನಡಪ್ರಭ’ಕ್ಕೆ ನೀಡಿದ ಮಾಹಿತಿ ಇದು.

ಸೋಮವಾರ ರಾತ್ರಿಯ ಆಕ್ರಮಣ ಅನಿರೀಕ್ಷಿತವಾಗಿತ್ತು. ಕಾಬೂಲ್‌ ವಿಮಾನ ನಿಲ್ದಾಣವನ್ನು ವಶಪಡಿಸಲು ತಾಲಿಬಾನ್‌ ಉಗ್ರರು ಮುಂದಾದ ಬಳಿಕ ಮರುದಿನ ಬೆಳಗ್ಗೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಸಹಿತ ಮಂಗಳೂರಿನ ಐವರನ್ನು ನ್ಯಾಟೋ ಪಡೆ ವಿಶೇಷ ವಿಮಾನ ಮೂಲಕ ಕತಾರ್‌ನ ಬೇಸ್‌ ಕ್ಯಾಂಪ್‌ಗೆ ತಲುಪಿಸಿತು. ಅಲ್ಲಿಂದ ಭಾರತೀಯ ವಾಯುಪಡೆ ವಿಮಾನದಲ್ಲಿ ಭಾನುವಾರ ದೆಹಲಿಗೆ ಕರೆತರಲಾಗಿದೆ.

ಅಫ್ಘಾನ್‌ನಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ: ಶೀಘ್ರದಲ್ಲೇ ತವರು ರಾಜ್ಯಕ್ಕೆ ಆಗಮನ!

ಐದೇ ದಿನದಲ್ಲಿ ಆಕ್ರಮಣ: ಅಷ್ಘಾನಿಸ್ತಾನದಿಂದ ಹಂತ ಹಂತವಾಗಿ ನ್ಯಾಟೋ ಸೇನೆ ವಾಪಸಾಗುತ್ತಿದ್ದಂತೆ ನಮ್ಮನ್ನು ಆ.11ರಂದು ಮುಝಾರಿ ಇ ಶರೀಫ್‌ ಕ್ಯಾಂಪ್‌ನಿಂದ ಕಾಬೂಲ್‌ನ ನ್ಯಾಟೋ ಸೇನಾ ನೆಲೆಗೆ ಕರೆಸಿಕೊಂಡರು. ನಾವು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ತಾಲಿಬಾನಿಗಳ ಉಪಟಳ ಇರಲಿಲ್ಲ. ಆದರೆ ಆ.16ರ ರಾತ್ರಿ ತಾಲಿಬಾನಿಗಳು ಕಾಬೂಲ್‌ ವಿಮಾನ ನಿಲ್ದಾಣ ವಶಪಡಿಸಲು ಮುಂದಾಗಿರುವುದೇ ರಾದ್ಧಾಂತಗಳಿಗೆ ಕಾರಣವಾಯಿತು.
ನಾಗರಿಕ ವಿಮಾನ ನಿಲ್ದಾಣದಿಂದ ರನ್‌ವೇ ದಾಟಿ ಸಾವಿರಾರು ಮಂದಿ ನ್ಯಾಟೋ ಬೇಸ್‌ಗೆ ನುಗ್ಗಿದ್ದು, ಅಲ್ಲಿಂದ ಸುರಕ್ಷಿತ ಏರ್‌ಲಿಫ್ಟ್‌ಗಾಗಿ ಸಿಕ್ಕಸಿಕ್ಕ ವಿಮಾನಗಳಿಗೆ ಜೋತು ಬೀಳಲಾರಂಭಿಸಿದರು. ಇದರಿಂದಾಗಿ ಸುರಕ್ಷಿತ ಏರ್‌ಲಿಫ್ಟ್‌ಗೆ ತಡೆ ಉಂಟಾಯಿತು ಎನ್ನುತ್ತಾರೆ ಅವರು.

ಇಂದು ತವರಿಗೆ ಆಗಮನ?

ಜಗದೀಶ್‌ ಪೂಜಾರಿ ಮೂಡುಬಿದಿರೆಯವರಾಗಿದ್ದು, ಇವರೊಂದಿಗೆ ನ್ಯಾಟೋ ಬೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಜಪೆಯ ದಿನೇಶ್‌ ರೈ, ಕಿನ್ನಿಗೋಳಿಯ ಡೆಸ್ಮಂಡ್‌ ಡೇವಿಡ್‌ ಡಿಸೋಜಾ, ಉಳ್ಳಾಲದ ಪ್ರಸಾದ್‌ ಆನಂದ್‌ ಹಾಗೂ ಬಿಜೈನ ಶ್ರವಣ್‌ ಅಂಚನ್‌ ಜೊತೆಗಿದ್ದಾರೆ. ವಿಮಾನ ಟಿಕೆಟ್‌ ಲಭಿಸಿದರೆ ಸೋಮವಾರವೇ ಊರಿಗೆ ಮರಳುವುದಾಗಿ ಜಗದೀಶ್‌ ಪೂಜಾರಿ ತಿಳಿಸಿದ್ದಾರೆ.
 

click me!