ಉತ್ತರಕ್ಕೆ ಹೆಚ್ಚು ಲೋಕಸಭಾ ಸೀಟು, ದಕ್ಷಿಣಕ್ಕೆ ಕಡಿಮೆ: ಹೈಕೋರ್ಟ್‌ ಕಿಡಿ!

By Suvarna NewsFirst Published Aug 23, 2021, 9:17 AM IST
Highlights

* ಜನಸಂಖ್ಯೆ ಇಳಿಸದ ಉತ್ತರದ ರಾಜ್ಯಗಳಿಗೇಕೆ ಹೆಚ್ಚು ಸೀಟು?

* ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಗಂಭೀರ ಪ್ರಶ್ನೆ

* ಜನಸಂಖ್ಯೆ ಇಳಿಸಿದ್ದಕ್ಕೆ ತಮಿಳುನಾಡಿಗೆ 2 ಸೀಟು ಕಡಿತ ಶಿಕ್ಷೆಯೇ?

* 5600 ಕೋಟಿ ರು. ಪರಿಹಾರ ನೀಡಲು ಕೇಂದ್ರಕ್ಕೆ ಸೂಚನೆ

ಚೆನ್ನೈ(ಆ.23): ಜನಸಂಖ್ಯಾ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನಸಂಖ್ಯೆ ಇಳಿಕೆಯಾಗುವಂತೆ ನೋಡಿಕೊಂಡ ದಕ್ಷಿಣದ ರಾಜ್ಯಗಳಿಗೆ ಲೋಕಸಭಾ ಸೀಟುಗಳನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರದ ನೀತಿಯನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ. ಜೊತೆಗೆ, ಜನಸಂಖ್ಯೆ ಕಡಿತಗೊಳಿಸುವಲ್ಲಿ ವಿಫಲವಾದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮುಂತಾದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸೀಟು ನೀಡಿರುವುದೇಕೆ ಎಂದೂ ಪ್ರಶ್ನಿಸಿದೆ.

ಕುತೂಹಲಕರ ಸಂಗತಿಯೆಂದರೆ, 1967ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿಗೆ 2 ಲೋಕಸಭಾ ಸೀಟು ಕಡಿತಗೊಳಿಸಿದ ಕಾರಣಕ್ಕೆ ಈವರೆಗೆ 14 ಚುನಾವಣೆಗಳಲ್ಲಿ ಆ ರಾಜ್ಯಕ್ಕಾದ ನಷ್ಟತುಂಬಿಕೊಡಲು ಒಟ್ಟು 5600 ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳನ್ನು ನಿಗದಿಪಡಿಸುವ ಕೇಂದ್ರ ಸರ್ಕಾರದ ನೀತಿಯನ್ನು ಪ್ರಶ್ನಿಸುವ ಈ ಆದೇಶವು ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಜನಸಂಖ್ಯೆ ಕಡಿಮೆಯಿರುವ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸಿದೆ.

ಆ.17ರಂದು ನ್ಯಾ| ಎನ್‌.ಕಿರುಬಕರನ್‌ ಹಾಗೂ ಬಿ.ಪುಗಳೇಂಧಿ ಅವರ ಪೀಠ ಈ ಆದೇಶ ನೀಡಿದ್ದು, ನಂತರ ಕಿರುಬಕರನ್‌ ನಿವೃತ್ತರಾಗಿದ್ದಾರೆ. ತಮಿಳುನಾಡಿನ ಲೋಕಸಭಾ ಕ್ಷೇತ್ರವೊಂದರ ಎಸ್‌ಸಿ ಮೀಸಲನ್ನು ತೆರವುಗೊಳಿಸುವಂತೆ ಕೋರಿದ್ದ ಅರ್ಜಿಯೊಂದರ ವಿಚಾರಣೆಯ ವೇಳೆ ಕೋರ್ಟ್‌ ಈ ಆದೇಶ ನೀಡಿದೆ.

ತಮಿಳುನಾಡಿಗೆ 2 ಸೀಟು ಕಡಿತ:

‘1962ರವರೆಗೆ ತಮಿಳುನಾಡಿಗೆ ಲೋಕಸಭೆಯಲ್ಲಿ 41 ಸದಸ್ಯರಿದ್ದರು. ನಂತರ ಜನಸಂಖ್ಯೆ ಇಳಿಕೆಯಾಗಿರುವ ಕಾರಣ ನೀಡಿ 1967ರ ಚುನಾವಣೆಯಲ್ಲಿ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 39ಕ್ಕೆ ಇಳಿಸಲಾಯಿತು. ಇದು ಕೇವಲ ಎರಡು ಸೀಟುಗಳ ಪ್ರಶ್ನೆಯಲ್ಲ. ದೇಶದಲ್ಲಿ ಒಂದೊಂದು ಮತಕ್ಕೂ ಬೆಲೆಯಿದೆ. 1999ರ ಅವಿಶ್ವಾಸಮತದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಒಂದೇ ಮತದಿಂದ ಬಿದ್ದುಹೋಯಿತು. ಯಾವುದೇ ತಪ್ಪು ಮಾಡದೆ, ಜನಸಂಖ್ಯಾ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶದಂತಹ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ಕಡಿತಗೊಳಿಸುವುದು ಎಷ್ಟುಸರಿ? ಬದಲಿಗೆ, ಈ ರಾಜ್ಯಗಳಿಗೆ ಬಹುಮಾನವಾಗಿ ರಾಜ್ಯಸಭಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬಹುದಿತ್ತು’ ಎಂದು ಆದೇಶದಲ್ಲಿ ಕೋರ್ಟ್‌ ಹೇಳಿದೆ.

ಸಂವಿಧಾನಕ್ಕೆ ತಿದ್ದುಪಡಿ ತನ್ನಿ:

‘ಸಂಸತ್ತಿನಲ್ಲಿ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ನಿರ್ಧರಿಸಲು ಜನಸಂಖ್ಯೆ ಮಾನದಂಡವಾಗಬಾರದು. ಹೀಗೆ ಮಾಡಿದರೆ ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸೋತ ರಾಜ್ಯಗಳಿಗೆ ಸಂಸತ್ತಿನಲ್ಲಿ ಹೆಚ್ಚು ಸೀಟು ನೀಡಿ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆಗ ದಕ್ಷಿಣದ ರಾಜ್ಯಗಳು ನಷ್ಟಅನುಭವಿಸುತ್ತವೆ. ನಮ್ಮ ದೇಶದಲ್ಲಿ ರಾಜ್ಯಗಳನ್ನು ರಾಜ್ಯ ಮರುವಿಂಗಡಣೆ ಕಾಯ್ದೆ 1956ರ ಅಡಿ ಭಾಷೆಯ ಆಧಾರದಲ್ಲಿ ವಿಂಗಡಿಸಲಾಗಿದೆ. ಭಾರತವು ಬಹು ಧರ್ಮದ, ಬಹು ಜನಾಂಗಗಳ, ಬಹು ಭಾಷಿಕರ ದೇಶ. ಹೀಗಾಗಿ ಇಲ್ಲಿ ಅಧಿಕಾರದ ಸಮತೋಲನ ಕಾಪಾಡಿಕೊಳ್ಳಲು ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಇದಕ್ಕಾಗಿ ಸಂವಿಧಾನದ 81ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಜನಸಂಖ್ಯೆ ಬದಲಾದರೂ ರಾಜ್ಯಗಳಿಗೆ ಸಂಸತ್ತಿನಲ್ಲಿನ ಪ್ರಾತಿನಿಧ್ಯ ಬದಲಾಗದಂತೆ ನೋಡಿಕೊಳ್ಳಬಹುದೇ ಎಂದು ಪರಿಶೀಲಿಸಿ’ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು 4 ವಾರ ಮುಂದೂಡಿತು.

1 ಸೀಟು ನಷ್ಟದಿಂದ 5 ವರ್ಷಕ್ಕೆ 200 ಕೋಟಿ ನಷ್ಟ

ಲೋಕಸಭಾ ಸೀಟು ಕಡಿತದಿಂದ ರಾಜ್ಯಕ್ಕಾಗುವ ನಷ್ಟವನ್ನು ಹಣದ ಲೆಕ್ಕದಲ್ಲಿ ಅಳೆಯಲು ಸಾಧ್ಯವಿಲ್ಲ. ಆದರೂ ಒಂದು ಸೀಟು ನಷ್ಟದಿಂದ ಐದು ವರ್ಷಕ್ಕೆ ಒಂದು ರಾಜ್ಯಕ್ಕೆ 200 ಕೋಟಿ ರು. ನಷ್ಟವಾಗಬಹುದು ಎಂದು ಅಂದಾಜಿಸಬಹುದು. ಆಗ ತಮಿಳುನಾಡಿಗೆ 1967ರ ನಂತರದ 14 ಚುನಾವಣೆಗಳಲ್ಲಿ ತಲಾ ಎರಡು ಸೀಟು ನಷ್ಟವಾಗಿರುವುದರಿಂದ ಕೇಂದ್ರ ಸರ್ಕಾರ 5600 ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

click me!