ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಿಂದ ದೂರ ಉಳಿದಿದೆ ಜೆಡಿಎಸ್

By Shrilakshmi ShriFirst Published Apr 6, 2017, 10:27 AM IST
Highlights

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗೆ 3 ದಿನಗಳು ಮಾತ್ರ ಬಾಕಿ ಉಳಿದಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇತ್ತ  ಬಿರುಬಿಸಿಲಿನಲ್ಲಿ ಬೆವರು ಒರೆಸಿಕೊಳ್ಳುತ್ತಾ ಪ್ರಚಾರ ನಡೆಸಬೇಕಾಗಿದ್ದ ಜಿಲ್ಲಾ ಜೆಡಿಎಸ್ ಮುಖಂಡರುಗಳು ಮನೆಯಲ್ಲಿ ಆರಾಮಾಗಿ ಉಳಿದುಬಿಟ್ಟಿದ್ದಾರೆ. ಹಾಗಾದರೆ ಎರಡೂ ಕ್ಷೇತ್ರಗಳ ಜೆಡಿಎಸ್ ನಾಯಕರು ಏನು ‌ಮಾಡ್ತಿದ್ದಾರೆ? ಇಲ್ಲಿದೆ ರಿಪೋರ್ಟ್.

ನಂಜನಗೂಡು(ಏ.06): ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗೆ 3 ದಿನಗಳು ಮಾತ್ರ ಬಾಕಿ ಉಳಿದಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇತ್ತ  ಬಿರುಬಿಸಿಲಿನಲ್ಲಿ ಬೆವರು ಒರೆಸಿಕೊಳ್ಳುತ್ತಾ ಪ್ರಚಾರ ನಡೆಸಬೇಕಾಗಿದ್ದ ಜಿಲ್ಲಾ ಜೆಡಿಎಸ್ ಮುಖಂಡರುಗಳು ಮನೆಯಲ್ಲಿ ಆರಾಮಾಗಿ ಉಳಿದುಬಿಟ್ಟಿದ್ದಾರೆ. ಹಾಗಾದರೆ ಎರಡೂ ಕ್ಷೇತ್ರಗಳ ಜೆಡಿಎಸ್ ನಾಯಕರು ಏನು ‌ಮಾಡ್ತಿದ್ದಾರೆ? ಇಲ್ಲಿದೆ ರಿಪೋರ್ಟ್.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮತಬೇಟೆ ಜೋರಾಗಿಯೇ ನಡೆದಿದೆ. ಆದರೆ, ಇದರ ಮಧ್ಯ ಸ್ಪರ್ಧಾಕಣದಿಂದ ದೂರ ಸರಿದಿರುವ  ಜೆಡಿಎಸ್ ನಾಯಕರು ತಟಸ್ಥರಾಗಿ ಉಳಿದಿದ್ದಾರೆ.

ವರಿಷ್ಠರಿಂದ ಇನ್ನೂ ಯಾವುದೇ ನಿರ್ದೇಶನ ಬಂದಿಲ್ಲ

ಹೌದು, ಒಂದು ವೇಳೆ ಜೆಡಿಎಸ್, ನಂಜನಗೂಡು ಮತ್ತು‌ ಗುಂಡ್ಲುಪೇಟೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಿದ್ದರೆ ಮನೆಯಲ್ಲಿ ಆರಾಮಾಗಿ ಉಳಿದಿರುವ ಜೆಡಿಎಸ್ ನಾಯಕರು ಬಿಸಿಲಿನಲ್ಲಿ‌ ಪ್ರಚಾರದಲ್ಲಿ ತೊಡಗಬೇಕಿತ್ತು. ಆದರೆ ಜೆಡಿಎಸ್ ವರಿಷ್ಠರ ನಿರ್ಧಾರದಿಂದ ಉಪಕದನದಿಂದ ದೂರ ಉಳಿದಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಬಹಳ ವರ್ಷಗಳ ಕಾಲ ಜೆಡಿಎಸ್ ನಲ್ಲೇ ಇದ್ದ ಕಾರಣ ಕೇಶವಮೂರ್ತಿ ಜೊತೆ ಗಳಸ್ಯ ಕಂಠಸ್ಯ ಎಂಬಂತಿದ್ದ ಕೆಲವರು ವೈಯಕ್ತಿಕ ಸಂಬಂಧದ ನೆಲೆಗಟ್ಟಿನಲ್ಲಿ ಉಪಚುನಾವಣೆಗೆ ಸೀಮಿತವಾಗಿ ಕೇಶವಮೂರ್ತಿ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಇರುವುದು ಕೂಡಾ ಅಷ್ಟಕ್ಕಷ್ಟೇ. ಹೀಗಾಗಿ ಸ್ಥಳೀಯ ಜೆಡಿಎಸ್ ನಾಯಕರು ತಟಸ್ಥರಾಗಿದ್ದಾರೆ. ಚಾಮರಾಜನಗರ ಜಿಲ್ಲಾಧ್ಯಕ್ಷ ಕಾಮರಾಜ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಕುಮಾರ್ ಸೇರಿದಂತೆ ಇತರ ಮುಖಂಡರು ಯಾವುದೇ ಪ್ರಚಾರದ ಟೆನ್ಷನ್ ಇಲ್ಲದೇ ಆರಾಮಾಗಿದ್ದಾರೆ. ಈ ಮಧ್ಯೆ ಹನೂರು ಭಾಗದಲ್ಲಿ‌ ಇದ್ದ ಸ್ವಲ್ಪ ಕಾರ್ಯಕರ್ತರು ಪರಿಮಳಾ ನಾಗಪ್ಪ ಅವರೊಂದಿಗೆ ಬಿಜೆಪಿ ಸೇರಿರುವುದರಿಂದ ಈಗ ಚಾಮರಾಜನಗರ ಜಿಲ್ಲೆಯಲ್ಲಿ  ಕಾರ್ಯಕರ್ತರನ್ನು ಹುಡುಕಬೇಕಾಗಿದೆ.

ಒಟ್ಟಾರೆ, ಪಕ್ಷದ ರಾಜ್ಯ ನಾಯಕತ್ವ ಇನ್ನೂ ಕೂಡಾ ಯಾವುದೇ ನಿರ್ಧಾರ ಮಾಡಿಲ್ಲ. ನಿಮ್ಮಿಷ್ಟದಂತೆ ಮತ ಚಲಾಯಿಸಿ ಎಂಬ ಆಂತರಿಕ ಸೂಚನೆ ಕೊಟ್ಟಿರುವ ಕಾರಣ ಸ್ಥಳೀಯ ಮುಖಂಡರು ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೇ ಉಳಿದಿದ್ದಾರೆ.

click me!