ಬಾಬ್ರಿ ಮಸೀದಿ ಪ್ರಕರಣ: ಅಡ್ವಾಣಿಗೆ ಮತ್ತೆ ಸಂಕಷ್ಟ..?

By Suvarna Web DeskFirst Published Apr 6, 2017, 10:01 AM IST
Highlights

ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ವಿಶ್ವ ಹಿಂದೂ ಪರಿಷತ್'ನ ಸಾಕಷ್ಟು ಕಾರ್ಯಕರ್ತರು ಬಾಬ್ರಿ ಮಸೀದಿ ದ್ವಂಸದ ಆರೋಪ ಎದುರಿಸುತ್ತಿದ್ದಾರೆ.

ನವದೆಹಲಿ(ಏ.06): ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾರೀ ಪಿತೂರಿ ನಡೆಸಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಸೇರಿದಂತೆ ಇತರ 12 ಮಂದಿಯ ವಿಚಾರಣೆ ನಡೆಸಬೇಕು ಎಂದು ಕೇಂದ್ರೀಯ ತನಿಖಾ ದಳ ಸುಪ್ರೀಂ ಕೋರ್ಟ್'ಗೆ ಮನವಿ ಮಾಡಿದೆ. ಕಳೆದ ತಿಂಗಳು ಸುಪ್ರೀಂಕೋರ್ಟ್ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕಾರಣಗಳಿಂದಾಗಿ ಅಡ್ವಾಣಿ ಹಾಗೂ ಇತರರ ವಿರುದ್ಧ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಲಖನೌ ಕೋರ್ಟ್'ನಲ್ಲಿ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಶತಮಾನಗಳಷ್ಟು ಹಳೆಯದಾದ ಬಾಬ್ರಿ ಮಸೀದಿಯನ್ನು 1992ರಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಹಾರೆ, ಗುದ್ದಲಿ, ಸುತ್ತಿಗೆ, ಪಿಕಾಸಿಗಳ ಸಹಾಯದಿಂದ ಧ್ವಂಸಗೊಳಿಸಿದ್ದರು. ಇದಾದ ನಂತರದ ಕೋಮು ಸಂಘರ್ಷದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿಯ ಪ್ರಾಣಹಾನಿ ಉಂಟಾಗಿತ್ತು. ಬಾಬ್ರಿ ಮಸೀದಿ ಧ್ವಂಸವು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ರಾಮ ಜನ್ಮಭೂಮಿಯಲ್ಲಿ ದೇವಸ್ಥಾನವನ್ನು ನೆಲಸಮ ಮಾಡಿ ಮೊಘಲ್ ದೊರೆ ಬಾಬರ್ ಮಸೀದಿ ನಿರ್ಮಿಸಿದ್ದಾನೆ ಎಂದು ಹಿಂದೂ ಕಾರ್ಯಕರ್ತರು ವಿಧ್ವಂಸಕ ಕೃತ್ಯ ನಡೆಸಿದ್ದರು.

ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ವಿಶ್ವ ಹಿಂದೂ ಪರಿಷತ್'ನ ಸಾಕಷ್ಟು ಕಾರ್ಯಕರ್ತರು ಬಾಬ್ರಿ ಮಸೀದಿ ದ್ವಂಸದ ಆರೋಪ ಎದುರಿಸುತ್ತಿದ್ದಾರೆ.

click me!